ಸಾಗರ: ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ 273 ಸ್ವತ್ತುದಾರರಿಗೆ ಪರಿಹಾರ ಕೊಡಲು, ಅಳತೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ ತಿಳಿಸಿದರು.
ಇಲ್ಲಿನ ನಗರಸಭೆ ವತಿಯಿಂದ ಸೋಮವಾರ ಸಾಗರ-ಹಾವೇರಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ವತ್ತುದಾರರು ಹೊಂದಿರುವ ಕಟ್ಟಡಕ್ಕೆ ಪರಿಹಾರ ನೀಡುವ ಸಂಬಂಧ ಹಮ್ಮಿಕೊಂಡಿರುವ ಅಳತೆ ಪ್ರಕ್ರಿಯೆಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈಚೆಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾರ್ಕೆಟ್ ರಸ್ತೆ ನಿವಾಸಿಗಳು ಜಾಗದ ಜೊತೆಗೆ ಕಟ್ಟಡಕ್ಕೂ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಶಾಸಕರು ಮತ್ತು ಜಿಲ್ಲಾ ಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದರು.
ಈ ಹಿನ್ನೆಲೆಯಲ್ಲಿ ಕಟ್ಟಡದ ಅಳತೆ ಮಾಡಿ, ನೆಲಸಮಗೊಳಿಸುವ ಪ್ರದೇಶವನ್ನು ಗುರುತು ಮಾಡಲಾಗುತ್ತಿದೆ. ರಸ್ತೆ ಅಗಲೀಕರಣಕ್ಕೆ ಸೊರಬ ರಸ್ತೆ ನಿವಾಸಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ಎಚ್.ಕೆ. ನಾಗಪ್ಪ ಮಾತನಾಡಿ, ಮುಂದಿನ ಒಂದು ತಿಂಗಳಿನೊಳಗೆ ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭಿಕ ಹಂತ ಪೂರ್ಣಗೊಳ್ಳುತ್ತದೆ. ಈಗಾಗಲೇ ರಸ್ತೆ ಅಗಲೀಕರಣದ ಅಳತೆ ಮಾಡಲಾಗಿದ್ದು, ಕಟ್ಟಡದ ಅಳತೆಯನ್ನು ಮಾಡಲಾಗುತ್ತಿದೆ. ಮುಂದಿನ ನಾಲ್ಕು ದಿನಗಳೊಳಗೆ ಕಟ್ಟಡ ಮಾರ್ಕಿಂಗ್ ಪ್ರಕ್ರಿಯೆ ಮುಗಿಯುತ್ತದೆ.
ಶಾಸಕರು ಮತ್ತು ಜಿಲ್ಲಾ ಧಿಕಾರಿಗಳು ಸ್ಪಂದಿಸಿದ್ದರಿಂದ ಕಟ್ಟಡಕ್ಕೂ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು. ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ್, ಸದಸ್ಯರಾದ ಭಾವನಾ ಸಂತೋಷ್, ಸಂತೋಷ್ ಶೇಟ್, ಆರ್. ಶ್ರೀನಿವಾಸ್, ಗಣೇಶಪ್ರಸಾದ್, ನಗರಸಭೆ ಅ ಧಿಕಾರಿಗಳಾದ ಸಂತೋಷಕುಮಾರ್, ಮದನ್ ಇನ್ನಿತರರು ಇದ್ದರು.