ಆನಂದಪುರ: ಕವಲೇದುರ್ಗದ ಲಿಂಗೈಕ್ಯ ಶ್ರೀಗಳು ಕವಲೇದುರ್ಗ ಮಠವನ್ನು ಭಕ್ತರ ಮನಸ್ಸಿನಲ್ಲಿ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಿದ್ದರು ಎಂದು ಆನಂದಪುರ ಮುರುಘಾಮಠದ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಸಮೀಪದ ಮುರುಘಾಮಠಕ್ಕೆ ಭಾನುವಾರ ಭೇಟಿ ನೀಡಿದ ಕವಲೇದುರ್ಗದ ನೂತನ ಉತ್ತರಾಧಿ ಕಾರಿಗಳಾದ ಶ್ರೀ ರುದ್ರಭೂಮಿ ಶಿವಾಚಾರ್ಯ ಸ್ವಾಮಿಗಳು ಪಟ್ಟಾಭಿಷೇಕಕ್ಕೆ ಶ್ರೀ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಆಹ್ವಾನಿಸಿದಾಗ ಆಶೀರ್ವದಿಸಿ ಮಾತನಾಡಿದ ಶ್ರೀಗಳು, ಮಠದ ಜೀರ್ಣೋದ್ಧಾರದ ಜೊತೆಗೆ ಶೈಕ್ಷಣಿಕವಾಗಿ ತೊಡಗಿಸಿಕೊಂಡ ಶ್ರೀಗಳು ಅನೇಕ ಪಿಎಚ್‌ಡಿಯನ್ನು ಸಹ ಪಡೆಯುವ ಮೂಲಕ ಜ್ಞಾನವನ್ನು ಸಂಪಾದಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು.
ಕವಲೇದುರ್ಗದ ಶ್ರೀಗಳು ಮನೆ- ಮನೆಗೆ ತೆರಳಿ ಭಕ್ತರಿಗೆ ಧರ್ಮ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಮಾಡಿದವರು. ಸದಾ ಕ್ರಿಯಾಶೀಲರಾಗಿದ್ದುಕೊಂಡು ಮಠಕ್ಕೆ ಬರುವ ಭಕ್ತರಿಗೆ ಜ್ಞಾನಧಾರೆಯ ಜೊತೆಗೆ ಸನ್ಮಾರ್ಗವನ್ನೂ ತೋರಿಸುವ ಕೆಲಸ ಮಾಡಿರುವ ಶ್ರೀಗಳು ಅಕಾಲಿಕವಾಗಿ ಲಿಂಗೈಕ್ಯರಾಗಿದ್ದು ಭಕ್ತರಿಗೆ ತೀವ್ರ ದುಃಖವನ್ನು ಉಂಟು ಮಾಡಿತ್ತು. ನೂತನ ಶ್ರೀಗಳು ಮಠಕ್ಕೆ ಬಂದಿದ್ದು, ಹಿಂದಿನ ಶ್ರೀಗಳು ನಡೆದ ದಾರಿಯಲ್ಲಿ ಸಾಗುವ ಮೂಲಕ ಕವಲೇದುರ್ಗ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.
ಬಾಳೆಹೊನ್ನೂರು ಯಡೆಯೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಲೆನಾಡು ಭಾಗದ ಮಠಗಳಿಗೆ ಉತ್ತರಾಧಿಕಾರಿ ನೇಮಕ ಮಾಡಲು ಸ್ಥಳೀಯವಾಗಿ ಯಾರೂ ಸಿಗದೆ ಇರುವುದರಿಂದ ಉತ್ತರ ಕರ್ನಾಟಕ ಭಾಗದಿಂದ ಶ್ರೀಗಳನ್ನು ಕರೆತಂದು ಉತ್ತರಾ ಧಿಕಾರಿ ನೇಮಕ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಕವಲೇದುರ್ಗ ಮಠದಲ್ಲಿ ಉತ್ತರಾ ಧಿಕಾರಿಗಳನ್ನು ನಿರ್ಮಿಸುವ ಕೇಂದ್ರವನ್ನಾಗಿಸುವ ಬಗ್ಗೆ ಗಮನ ಹರಿಸಲಾಗಿದೆ. ಧರ್ಮ ಅವನತಿಯತ್ತ ಸಾಗುತ್ತಿದೆ. ಕಡಿವಾಣ ಹಾಕಲಾಗದಷ್ಟು ನಾಗಾಲೋಟದಲ್ಲಿ ಧರ್ಮ ನಾಶವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೀಡುವಂತಹ ಗುರುಕುಲ ಪ್ರಾರಂಭವಾಗುವುದರಿಂದ ಧರ್ಮದ ಉಳಿವು ಸಾಧ್ಯ ಎಂದರು.
ಕವಲೇದುರ್ಗ ಮಠದ ನೂತನ ಶ್ರೀಗಳಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕವಲೇದುರ್ಗದ ಹಿಂದಿನ ಶ್ರೀಗಳು ಮಠದ ಶ್ರೇಯೋಭಿವೃದ್ಧಿªಗೆ ಅಹರ್ನಿಶಿ ಕೆಲಸ ಮಾಡಿದ್ದಾರೆ. ಅವರು ಸಾಗಿಬಂದ ಹಾದಿಯಲ್ಲಿ ನಡೆಯುವ ಜೊತೆಗೆ ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.
ಬಿಳಕಿ ಹಿರೇಮಠದ ರಾಜವೇಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ| ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ ಪ್ರಭು ಮಹಾಸ್ವಾಮಿಗಳು ಇದ್ದರು.