Advertisement

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

10:46 PM Jul 01, 2021 | Shreeraj Acharya |

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌, ರಸಗೊಬ್ಬರ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆ ಏರಿಸಿರುವುದನ್ನು ಖಂಡಿಸಿ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯಕ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಘಟಕದ ಜೆಡಿಎಸ್‌ ಕಾರ್ಯಕರ್ತರು ಬುಧವಾರ ಜಿಲ್ಲಾ ಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೊರೊನಾ ಸೋಂಕು ಹಾಗೂ ಅದರ ನಿಯಂತ್ರಣಕ್ಕೆ ದೇಶ ಮತ್ತು ರಾಜ್ಯಾದ್ಯಂತ ವಿ ಧಿಸಲಾದ ಸಂಪೂರ್ಣ ಲಾಕ್‌ಡೌನ್‌ ನಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರ ಜನಸಾಮಾನ್ಯರ, ರೈತರ ಕೂಲಿ ಕಾರ್ಮಿಕರ ಹಾಗೂ ಬಡವರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಏಳೆದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸೋಂಕು ಹಾಗೂ ಲಾಕ್‌ಡೌನ್‌ನಿಂದಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳು ಮೃತಪಟ್ಟು ಕುಟುಂಬಗಳು ಬೀದಿ ಪಾಲಾಗಿವೆ. ಅಲ್ಲದೇ ಅನೇಕ ಕುಟುಂಬಗಳಲ್ಲಿ ತಂದೆ-ತಾಯಿ ಮೃತಪಟ್ಟು ಮಕ್ಕಳು ಅನಾಥ ರಾಗಿದ್ದಾರೆ. ಲಾಕ್‌ಡೌನ್‌ನಿಂದ ರೈತರು ಬೆಳೆದ ಆಹಾರ ಸಾಮಾಗ್ರಿ, ತರಕಾರಿ, ಹೂವು-ಹಣ್ಣು ಕಟಾವು ಮಾಡಿ ಅದನ್ನು ಮಾರುಕಟ್ಟಗೆ ಸಾಗಿಸಲಾಗದೆ ಪರದಾಡಿದ್ದಾರೆ.

ಅಲ್ಲದೆ ವರ್ತಕರು ಬೆಳೆ ಖರೀದಿಸದ್ದರಿಂದ ನಷ್ಟ ಅನುಭವಿಸಿ ನಿರ್ಗತಿಕರಾಗಿದ್ದಾರೆ. ಇಂತಹ ಸಮಯದಲ್ಲಿ ಬೆಲೆ ಏರಿಕೆ ಮಾಡಿದ್ದು ರೈತರ, ಬಡವರ ಬದುಕನ್ನೇ ಬುಡಮೇಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೈಲ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯ ಸರಕಾರ ವಿದ್ಯುತ್‌ ದರ ಏರಿಕೆ ಮಾಡಿದೆ. ಸರ್ಕಾರ ಇದನ್ನು ಪುನರ್‌ ವಿಮರ್ಶಿಸಿ ವಿದ್ಯುತ್‌ ದರ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಾಂತರ ಜೆಡಿಎಸ್‌ ಕಾರ್ಯಾಧ್ಯಕ್ಷ ಕಾಂತರಾಜ್‌, ಎಪಿಎಂಸಿ ಸದಸ್ಯ ಎಸ್‌.ಎನ್‌.ಮಹೇಶ್‌, ದಾದಾಪೀರ್‌, ಕುಮಾರನಾಯ್ಕ, ಗೀತಾಸತೀಶ್‌, ನಾರಾಯಣಪುರ ಕುಮಾರ ನಾಯ್ಕ, ಸತೀಶ್‌ಗೌಡ, ಸುರೇಶ್‌, ಪ್ರಭಾಕರ್‌ ಬಾರಂಗಿ ಇನ್ನಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next