Advertisement

ಹೊಂಗಿರಣದಲ್ಲಿ ಸಹಜ ಅರಣ್ಯಕ್ಕೆ ಚಾಲನೆ

10:59 PM Jun 30, 2021 | Shreeraj Acharya |

ಸಾಗರ: ತಾಲೂಕಿನ ಅಮಟೇಕೊಪ್ಪದ ಹೊಂಗಿರಣ ಕಾಲೇಜಿನ ಆವರಣದಲ್ಲಿ ಹೆಚ್ಚು ಸಾಂದ್ರತೆಯ ಕ್ಯಾಸಡವಿ ಪದ್ಧತಿಯಲ್ಲಿ ಪಶ್ಚಿಮ ಘಟ್ಟಗಳ ಸಹಜವಾದ ಅರಣ್ಯ ಬೆಳೆಸುವ ಕಾರ್ಯ ನಡೆಯಿತು.

Advertisement

ನಗರದ ಸ್ವಾನ್‌ ಆ್ಯಂಡ್‌ ಮ್ಯಾನ್‌, ಲೋಕ ಹಿತಂ ಪ್ರತಿಷ್ಠಾನ, ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ -ಪ್ರಾಣ, ಹಸಿರು ಸಾಗರ, ಅಭಿನಯ ಸಾಗರ ಮತ್ತು ಯೂತ್‌ ಹಾಸ್ಟೆಲ್ಸ್‌ ಅಸೋಸಿಯೇಷನ್‌ನ ಸುಮಾರು 80 ಜನ ಹಸಿರು ಶ್ರಮಿಕರು ಸಸಿ ನೆಡುವ ಕೆಲಸದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಕಲ್ಯಾಣ ಸುಂದರಂ, ವಿವಿಧ ಅಭಿವೃದ್ಧಿ ಕಾರ್ಯಗಳು, ದೊಡ್ಡ ದೊಡ್ಡ ಯೋಜನೆಗಳು, ಬಲಾಡ್ಯರ ಒತ್ತುವರಿ ಮೊದಲಾದ ಕಾರಣಗಳಿಂದಾಗಿ ಪಶ್ಚಿಮ ಘಟ್ಟಗಳು ಸೊರಗುತ್ತಿವೆ. ಮಳೆಗಾಲಕ್ಕೂ ಮುನ್ನವೇ ಗುಡ್ಡ ಕುಸಿತದ ಭೀತಿ ಶುರುವಾಗಿದೆ.

ಅತ್ಯಂತ ವೇಗವಾಗಿ ಪಶ್ಚಿಮ ಘಟ್ಟಗಳ ಪತನವಾಗುತ್ತಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ಹಸಿರು ಉಳಿದರೆ ಮಾತ್ರ ಮನುಜ ಉಳಿಯುತ್ತಾನೆ. ಮುಂದಿನ ಪೀಳಿಗೆ ಉಳಿಯುತ್ತದೆ ಎಂದರು. ಕ್ಯಾಸಳಿಲು ಎಂಬ ಅಳಿಲು ಕುಟುಂಬದ ವನ್ಯಪ್ರಾಣಿಯ ಬೀಜ ಪ್ರಸರಣದ ಮೂಲಕ ಸಹಜ ಅರಣ್ಯ ವೃದ್ಧಿಸುವ ಬದುಕಿನ ಗತಿಯಿಂದ ಪ್ರೇರಣೆಗೊಂಡು ಒಡಮೂಡಿದ ಪರಿಕಲ್ಪನೆಯೇ ಕ್ಯಾಸಡವಿ ಅರಣ್ಯ ನಿರ್ಮಾಣ ಪದ್ಧತಿ.

ಅತ್ಯಂತ ಕಡಿಮೆ ನಿರ್ವಹಣೆಯನ್ನು ಬಯಸುವ ಈ ಪದ್ಧತಿಯಲ್ಲಿ ಸ್ಥಳೀಯ ಕಾಡು ಜಾತಿಯ ಸಸ್ಯಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಕಡಿಮೆ ಅಂತರದಲ್ಲಿ ಹೆಚ್ಚಿನ ಸಸಿಗಳನ್ನು ನೆಡುವುದೇ ಇದರ ಜೀವಾಳ. ಹಲವು ಸಂಖ್ಯೆಗಳಲ್ಲಿ ನೆಟ್ಟಂತಹ ಕಾಡು ಸಸ್ಯಗಳಲ್ಲಿ ಕೆಲವು ಸಮರ್ಥವಾದ ಸಸ್ಯಗಳು ಮಾತ್ರ ನೈಸರ್ಗಿಕ ಆಯ್ಕೆಯ ಮೂಲಕ ಉಳಿದುಕೊಂಡು ದಟ್ಟವಾದ ಹಸಿರು ಹೊದಿಕೆಯನ್ನು ಹೊಂದುತ್ತವೆ.

Advertisement

ಶೀಘ್ರ ಅರಣ್ಯ ವರ್ಧನೆ, ಮಣ್ಣಿನ ತೇವಾಂಶ ಉಳಿವಿಕೆ, ಭೂ ಸವಕಳಿ ತಡೆ, ವನ್ಯಜೀವಿಗಳಿಗೆ ನೆಲೆ, ನೀರಿಂಗಿಸುವಿಕೆ ಹೀಗೆ ಹಲವು ತರಹದ ಪಾರಿಸಾರಿಕ ಉಪಯೋಗಗಳಿವೆ ಎಂದರು. ಪ್ರಾಣದ ಡಾ| ಗಿರೀಶ್‌ ಜನ್ನೆ ಮತ್ತು ಕೌಶಿಕ್‌ ಕಾನುಗೋಡು, ಜಯಕುಮಾರ್‌, ಶ್ರೀಧರ್‌ ಭಟ್‌, ಹೊಂಗಿರಣ ಪ್ರಾಚಾರ್ಯೆ ಶೋಭಾ ರವೀಂದ್ರ, ಯೂತ್‌ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷರಾದ ಮಹಮದ್‌ ರ, ಪ್ರಕಾಶ್‌, ಅಮಿತ್‌ ಕುಮಾರ್‌, ಗೌತಮ್‌ ಪೈ, ನಟರಾಜ್‌ ಗುಲುಗುಂಜಿಮನೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next