ಸಾಗರ: ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಗೆ ಆರೋಗ್ಯದ ವಿಷಯ ಕೂಡ ಸೇರ್ಪಡೆಯಾಗಬೇಕು ಎಂದು ರಾಜ್ಯದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಪ್ರತಿಪಾದಿಸಿದ್ದಾರೆ. ಇಲ್ಲಿನ ಸ್ಪಂದನ ರಂಗತಂಡ ಉಪನ್ಯಾಸಕ, ಸಾಮಾಜಿಕ ಕಾರ್ಯಕರ್ತ ಡಾ| ವಿಠಲ್ ಭಂಡಾರಿ ಅವರ ನೆನಪಿನಲ್ಲಿ ಭಾನುವಾರ ವೆಬಿನಾರ್‌ನಲ್ಲಿ ಆಯೋಜಿಸಿದ್ದ “ಹಣತೆ ಹಚ್ಚೋಣ’ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯದ ವಿಷಯವು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪಟ್ಟಿಯಲ್ಲಿ ಸೇರಿದೆ. ಹೀಗಾಗಿ ಜನರ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಸರ್ಕಾರದ ಹೊಣೆಗಾರಿಕೆ ಸೀಮಿತವಾಗಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ದೇಶದ ಎಲ್ಲೆಡೆ ವ್ಯಾಪಕವಾಗಿ ಹರಡಿರುವ ಈ ಹೊತ್ತಿನಲ್ಲಿ ಆರೋಗ್ಯದ ವಿಷಯ ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿದರೆ ಸರ್ಕಾರದ ಜವಾಬ್ದಾರಿಗೊಂದು ಸ್ಪಷ್ಟ ರೂಪ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ವಲಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಲಿಷ್ಟಗೊಳಿಸಿದಾಗ ಮಾತ್ರ ಸಾಮಾನ್ಯ ಜನರಿಗೂ ಉತ್ತಮ ಸೇವೆ ಸಿಗಲು ಸಾಧ್ಯ. ಹಾಗೆಂದು ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸುವ ಅಗತ್ಯವಿಲ್ಲ. ಆದರೆ ಖಾಸಗಿ ವಲಯಕ್ಕೆ ಆರೋಗ್ಯ ಕ್ಷೇತ್ರ ಒಂದು ವ್ಯಾಪಾರದಂತೆ ಆಗಲು ಅವಕಾಶ ನೀಡಬಾರದು. ಸೂಕ್ತ ಕಾನೂನುಗಳ ಮೂಲಕ ನಿಯಂತ್ರಣ ಹೇರಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕಾಂಗ, ಕಾರ್ಯಾಂಗ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದಾಗ ಮಧ್ಯೆ ಪ್ರವೇಶಿಸುವುದು ನ್ಯಾಯಾಂಗಕ್ಕೆ ಅನಿವಾರ್ಯವಾಗುತ್ತದೆ. ಕೋವಿಡ್ ಕಾಲದಲ್ಲೂ ನ್ಯಾಯಾಲಯ ಸರ್ಕಾರದ ಕಿವಿ ಹಿಂಡಿದ ಕಾರಣ ಎಲ್ಲರಿಗೂ ಉಚಿತ ಲಸಿಕೆ ನೀಡುವಂತಹ ಕಾರ್ಯಕ್ರಮ ಘೋಷಣೆಯಾಯಿತು. ನ್ಯಾಯಾಂಗದ ಮಧ್ಯೆ ಪ್ರವೇಶವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಕುರಿತು ಅವಹೇಳನ ಮಾಡುವ ಪ್ರವೃತ್ತಿ ಸರಿಯಲ್ಲ ಎಂದರು. ಸಂಸ್ಕೃತಿ ಚಿಂತಕ ಕೆ. ಫಣಿರಾಜ್ ಆಶಯ ಭಾಷಣ ಮಾಡಿದರು.
ಮುನೀರ್ ಕಟಿಪಳ್ಳ, ಪೂರ್ಣಿಮಾ, ಎಂ.ಎಸ್. ಶೆಟ್ಟಿ, ಕಿರಣ್ ಭಟ್ ಮಾತನಾಡಿದರು. ರೇಖಾಂಬ ಪ್ರಾರ್ಥಿಸಿದರು. ರಿಯಾಜ್ ಸ್ಪಂದನ ಸ್ವಾಗತಿಸಿದರು. ನವೀನ್ ಹಾಸನ ವಂದಿಸಿದರು. ಎಂ. ರಾಘವೇಂದ್ರ ನಿರೂಪಿಸಿದರು.