Advertisement

ಜಾನಪದ ಉಳಿಸಿ ಬೆಳೆಸಲು ಪ್ರಯತ್ನ : ಮಂಜಮ್ಮ

06:50 PM Jan 29, 2021 | Team Udayavani |

ಸಾಗರ: ಶಿಷ್ಟಕಲೆ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ತನ್ನದೇ ಕಾರ್ಯ ಚೌಕಟ್ಟಿನೊಳಗೆ ಪ್ರಯತ್ನ ನಡೆಸುತ್ತಿದೆ. ಮೂಲ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಕಾಡೆಮಿ ಅನೇಕ ತರಬೇತಿ ಶಿಬಿರಗಳನ್ನು ಸಹ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸುತ್ತಿದೆ
ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತರಾದ ಮಾತಾ ಬಿ. ಮಂಜಮ್ಮ
ಜೋಗತಿ ತಿಳಿಸಿದರು.

Advertisement

ಇಲ್ಲಿನ ಇಂದಿರಾ ಗಾಂಧಿ  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ “ಜನಪದ ವರ್ತಮಾನದ ಸವಾಲುಗಳು – ಜನಪದ ಸಾಹಿತ್ಯ ಮತ್ತು ಮಹಿಳೆ’ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಜನ ತೊಡಗಿಸಿಕೊಂಡು ಕಲೆಯನ್ನು ಮುಂದಿನ ಪೀಳಿಗೆಗೆ ಪ್ರಸರಿಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ.
ಯುವಜನಾಂಗ ಟಿ.ವಿ., ಮೊಬೈಲ್‌ ಇನ್ನಿತರ ಸಾಮಾಜಿಕ ಜಾಲತಾಣದ ದಾಸರಾಗುತ್ತಿದ್ದಾರೆ. ಇದರಿಂದ ನಮ್ಮತನದ ಜೊತೆಗೆ ನಮ್ಮ ಕಲೆ, ಸಂಸ್ಕೃತಿ ಸಹ ನಶಿಸುತ್ತಿದೆ. ಕಲೆ ಬೆಳೆಸಿ, ಉಳಿಸಿ ಎಂಬ ಘೋಷಣೆ ಭಾಷಣಕ್ಕೆ ಸೀಮಿತವಾಗದೇ ಅದು ಅಕ್ಷರಶಃ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕು. ನಮ್ಮ ನೆಲಮೂಲ ಕಲೆ ಉಳಿದರೆ ಮಾತ್ರ ನಮ್ಮತನ ಶಾಶ್ವತವಾಗಿ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಜಾನಪದ ಕಲೆಯನ್ನು ಕಲಿಸುವ ಕೆಲಸ ಮಾಡಬೇಕು. ಸರ್ಕಾರ ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತೆ ಆಗಬೇಕು. ಜಾನಪದ ವಿದ್ವಾಂಸರು ಬೇರೆ, ಜಾನಪದ
ಕಲಾವಿದರು ಬೇರೆ ಎನ್ನುವ ತಾರತಮ್ಯ ನೀತಿ ಬದಲಾಗಬೇಕು. ಇಂತಹ ವಿಚಾರ ಸಂಕಿರಣಗಳ ಮೂಲಕ ಕಲೆಯನ್ನು ಯುವಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌, ಜಾನಪದ ಎನ್ನುವುದು ಭಾವನೆಗೆ ಸಂಬಂಧಪಟ್ಟ ಕಲಾಮಾಧ್ಯಮ. ಭಾವನೆಗಳನ್ನು ಬೆಸೆಯುವ ವಿಶೇಷ ಶಕ್ತಿ ಇರುವುದು ಜಾನಪದ ಕಲೆಗೆ ಮಾತ್ರ. ಹಣ ಸಂಪತ್ತು ನಿಜವಾದ ಅಸ್ತಿಯಲ್ಲ.
ನಿಜವಾದ ಆಸ್ತಿ ಕಲೆ, ಸಾಹಿತ್ಯ, ಜಾನಪದ, ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ 2019ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಹುಸೇನಾಬಿ ಬುಡೇನಸಾಬ್‌ ಸಿದ್ದಿ
ಮತ್ತು ಶಿವಮೊಗ್ಗ ಜಿಲ್ಲೆಯ ಸೋಬಾನೆ ಪದ ಕಲಾವಿದೆ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು. ಈ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ
ಮಾತಾ ಬಿ. ಮಂಜಮ್ಮ ಜೋಗತಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ನಗರಸಭೆ ಸದಸ್ಯ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಡಿ. ಮೇಘರಾಜ್‌ ಮಾತನಾಡಿದರು. ನಗರಸಭೆ ಸದಸ್ಯರಾದ ಬಿ.ಎಚ್‌. ಲಿಂಗರಾಜ್‌, ಸಂತೋಷ್‌ ಶೇಟ್‌, ಜಾನಪದ ಅಕಾಡೆಮಿಯ ಪ್ರಕಾಶ್‌, ಪ್ರಾಚಾರ್ಯ ಡಾ| ಅಶೋಕ್‌ ಡಿ. ರೇವಣಕರ್‌, ಕನ್ನಡ ವಿಭಾಗದ ಮುಖಸ್ಥ ಡಾ| ಜಿ.ಸಣ್ಣಹನುಮಪ್ಪ ಇದ್ದರು. ಅಮೃತ ಪ್ರಾರ್ಥಿಸಿದರು. ರಮೇಶ್‌ ಡಿ. ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸುಮತಿ ಸಿ. ಗೌಡ ವಂದಿಸಿದರು. ಗಣಪತಿ ಎಸ್‌.ಎಂ. ನಿರೂಪಿಸಿದರು.

ಓದಿ : ಜುಲೈ 16ರಂದು ವಿಶ್ವದಾದ್ಯಂತ  ತೆರೆಗೆ ಅಪ್ಪಳಿಸಲಿದೆ ಕೆ.ಜಿ.ಎಫ್ -2

Advertisement

Udayavani is now on Telegram. Click here to join our channel and stay updated with the latest news.

Next