ಶಿವಮೊಗ್ಗ: ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅನೇಕ ಮಹನೀಯರು ಅಪಾರ ತ್ಯಾಗ ಮಾಡಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡರೆ ಹೋರಾಟದ ಕಿಚ್ಚು ಹೆಚ್ಚುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ತುರ್ತು ಪರಿಸ್ಥಿತಿಯ ಕರಾಳ ನೆನಪು ಜನಾಕ್ರೋಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಸರ್ಕಾರದ ಭ್ರಷ್ಟಾಚಾರ ವಿರುದ್ಧದ ಹೋರಾಟ ಆರಂಭವಾದ ನಂತರ ಇಂದಿರಾಗಾಂಧಿ ಯವರು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದರು. ಇದರ ಪರಿಣಾಮವಾಗಿ ಜಯಪ್ರಕಾಶ್ ನಾರಾಯಣ್, ಮೊರಾ ರ್ಜಿ ದೇಸಾಯಿ, ಚಂದ್ರಶೇಖರ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ನಾನು ಸೇರಿದಂತೆ ಅನೇಕ ಮುಖಂಡರು ಜೈಲಿಗೆ ಹೋಗಬೇಕಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ನಡೆಸಿದ್ದ ಎಂ.ಆನಂದರಾವ್, ಟಿ.ಜಿ. ಶ್ರೀಧರರಾವ್ ಅವರುಗಳನ್ನು ನೆನೆಯುವುದು ಅಗತ್ಯವಾಗಿದೆ ಎಂದರು.
ಅಂದು ಆರಂಭವಾದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಂದು ಸಹ ಮುಂದುವರೆದಿದೆ. ತುರ್ತು ಪರಿಸ್ಥಿತಿ ಘೋಷಣೆಯಾಗಿ 46 ವರ್ಷಗಳು ಗತಿಸಿವೆ. ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಏಳು ವರ್ಷದ ತಮ್ಮ ಆಡಳಿತ ಅವ ಧಿಯಲ್ಲಿ ಭ್ರಷ್ಟಾಚಾರದ ಸೋಂಕು ಕೂಡಾ ತಗುಲದ ರೀತಿಯಲ್ಲಿ ದೇಶವನ್ನು ಮುನ್ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಬಿ.ಎಸ್. ಸುಬ್ಬಣ್ಣ ಮಾತನಾಡಿ, ಬ್ರಿಟೀಷರ ಕಾಲದ ಪೊಲೀಸ್ ಪದ್ಧತಿ ಇಂದು ಸಹ ಮುಂದುವರೆದಿದೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತಲ್ಲದೆ ಆರ್‌ಎಸ್‌ಎಸ್‌ನ ಪ್ರಮುಖರೆಲ್ಲರನ್ನು ಪೊಲೀಸರು ಬಂಧಿ ಸಿದ್ದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ, ಗಿರೀಶ್ ಪಟೇಲ್, ಪದ್ಮನಾಭ ಭಟ್, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ರಂಗನಾಥ್, ಕುರುವಳ್ಳಿ ಮಂಜುನಾಥ್, ವೆಂಕಟೇಶ್ ಸಾಗರ್, ರವಿಕುಮಾರ್ ಇತರರು ಇದ್ದರು.