ಶಿವಮೊಗ್ಗ: ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ ಹಾಗೂ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿದೆ.
ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದೆ. ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರ ಪರಿಣಾಮ ತುಂಗಾ ನದು ಉಕ್ಕಿ ಹರಿಯುತ್ತಿದೆ. ತುಂಗಾ ಜಲಾಶಯದ ಗೇಟ…ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ.
ಇದರಿಂದ ಶಿವಮೊಗ್ಗದ ಕೋರ್ಪಲಯ್ಯನ ಛತ್ರದ ಬಳಿ ಇರುವ ಕಲ್ಲಿನ ಮಂಟಪ ಮುಳುಗಲು ಕೇವಲ 1 ಅಡಿ ಮಾತ್ರ ಬಾಕಿಯಿದ್ದು, ಮಳೆ ಮುಂದುವರಿದರೆ ಮಂಟಪ ಮುಳುಗುವ ಸಾಧ್ಯತೆಗಳಿವೆ. ನದಿಗೆ 34,700 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲೂ ಕೂಡ ನೀರಿನ ಮಟ್ಟ ಏರುತ್ತಿದೆ.
ಗರಿಷ್ಟ ಮಟ್ಟ 1819 ಅಡಿ ಇದ್ದು, ಇಂದಿನ ನೀರಿನ ಮಟ್ಟ 1,781.45 ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,760.20 ಅಡಿಯಿತ್ತು. ಭದ್ರಾ ಜಲಾಶಯದಲ್ಲೂ ಕೂಡ ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನದಲ್ಲಿ 135 ಅಡಿ ನೀರಿತ್ತು.
ಈಗ 146.60 ಅಡಿ ನೀರಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದೆ. ರೈತರು ತಮ್ಮ ಕೃಷಿ ಜಮೀನಿನತ್ತ ಮುಖ ಮಾಡಿದ್ದು, ಭೂಮಿ ಹಸನು ಕಾರ್ಯದಲ್ಲಿ ತೊಡಗಿದ್ದಾರೆ.