ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶರಾವತಿ ನದಿ ಕಣಿವೆಯಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕಲಾರಂಭಿಸಿದೆ. ಆದರೆ ಹಾಲ್ನೊರೆಯ ಜಲಧಾರೆ ವೀಕ್ಷಣೆಗೆ ಕೊರೊನಾ ಲಾಕ್‌ಡೌನ್ ಬ್ರೇಕ್ ಹಾಕಿದೆ.
ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ಕಳೆದ ಐದಾರು ದಿನದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ರಾಜಾ, ರಾಣಿ, ರೋರರ್, ರಾಕೇಟ್ ಕವಲುಗಳಲ್ಲಿ ನೀರು ರಭಸದಿಂದ ಧುಮ್ಮಿಕ್ಕುತ್ತಿವೆ. ಹೊಸನಗರ ತಾಲೂಕಿನಲ್ಲಿ ದಾಖಲೆಯ 33 ಸೆಂಟಿಮೀಟರ್‌ಗೂ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯಕ್ಕೂ ಹೆಚ್ಚಿನ ನೀರು ಹರಿದುಬರುತ್ತಿದೆ.
ಇದಲ್ಲದೆ ಜಲಾಶಯದಿಂದ ಜಲಪಾತದ ನಡುವಿನ ಪ್ರದೇಶದಲ್ಲೂ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ. ಆದರೆ ಈ ವರ್ಷ ಜೋಗದ ವೈಭವವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಪ್ರವಾಸಿಗರಿಗೆ ಇಲ್ಲವಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಪ್ರವೇಶ ನಿಬಂìಧಿ ಸಲಾಗಿದೆ. ಹೀಗಾಗಿ ಜೋಗದ ಪ್ರಮುಖ ದ್ವಾರಕ್ಕೆ ಬೀಗ ಹಾಕಲಾಗಿದೆ.
ಜೋಗ ಜಲಪಾತ ವೀಕ್ಷಣೆಗಾಗಿ ಹತ್ತಾರು ಮಂದಿ ಪ್ರವಾಸಿಗರು ಆಗಮಿಸಿ ಗೇಟ್‌ನ ಕೊರಗು! ಬೀಗ ನೋಡಿ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸಾಗುತ್ತಿದ್ದಾರೆ.
ಮಳೆಯಿಂದ ಜೋಗ ಮೈದುಂಬಿರುವ ವಿಷಯ ತಿಳಿದು ಅನೇಕರು ಇದನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದರೂ ವೀಕ್ಷಣೆ ಸಾಧ್ಯವಾಗದೆ ನಿರಾಸೆಯಿಂದ ಮರಳುತ್ತಿದ್ದಾರೆ. ಜೋಗ ಜಲಪಾತದ ದ್ವಾರಕ್ಕೆ ಬೀಗ ಹಾಕಲಾಗಿದ್ದು, ಸರ್ಕಾರದ ಆದೇಶದ ಬಳಿಕವಷ್ಟೇ ಜೋಗ ಜಲಪಾತದ ವೀಕ್ಷಣೆ ಸಾಧ್ಯವಾಗಲಿದೆ.
ನಿರಂತರ ಮಳೆಯಿಂದ ಈ ಬಾರಿ ಜೋಗ ಜಲಪಾತ ಮೈಂದುಬಿ ಧುಮ್ಮಿಕ್ಕುತ್ತಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮೂರು ವರ್ಷದ ಹಿಂದಿನ ವಿಡಿಯೋಗಳು ಶೇರ್ ಆಗುತ್ತಿವೆ. ಭಾರೀ ಪ್ರಮಾಣದ ನೀರು ಧುಮ್ಮಿಕ್ಕುತ್ತಿರುವ ವಿಡಿಯೋ ವೈರಲ್ ಆಗಿದೆ.