ಶಿವಮೊಗ್ಗ: ತೈಲ ಬೆಲೆ ಏರಿಕೆ ವಿರೋಧಿ ಸಿ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ನೇತೃತ್ವದಲ್ಲಿ ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಮುಖಂಡರು ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಮೇಲೆ ಗದಾಪ್ರಹಾರ ನಡೆಸಿದೆ.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಶ್ರೀಮಂತರಿಗೆ ಮಣೆ ಹಾಕಿದ ಸರ್ಕಾರ ಬಡವರನ್ನು ತುಳಿಯುತ್ತಿದೆ. ಸಾಮಾನ್ಯರ ಬದುಕನ್ನು ಕಸಿದುಕೊಂಡು ತೆರಿಗೆ ಏರಿಸಿ ಅಕ್ಷರಶಃ ಸುಲಿಗೆಗೆ ಇಳಿದಿದೆ. ಈ ಹಗಲು ದರೋಡೆಯ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟ ಮುಂದುವರಿಸಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಶೇ.30 ರಿಂದ ಶೇ.22ಕ್ಕೆ ಇಳಿಸಿದೆ.
ಆದರೆ ಜನ ಸಾಮಾನ್ಯರು ನಿತ್ಯ ಬಳಸುವ ವಸ್ತುಗಳ ಮೇಲೆ ತೆರಿಗೆ ಏರಿಸಿದೆ. ಗರೀಬಿ ಹಠಾವೋ ಎಂಬ ಘೋಷಣೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಇದು ಬಂಡವಾಳಶಾಹಿಗಳ ಪರವಾದ ಸರ್ಕಾರ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ನೇಪಾಳ ಮುಂತಾದ ದೇಶಗಳಲ್ಲಿ ತೈಲಬೆಲೆ 50 ರಿಂದ 70 ರೂ. ಒಳಗೆ ಇದ್ದರೆ ಭಾರತದಲ್ಲಿ ಮಾತ್ರ ಶತಕ ಬಾರಿಸಿದೆ. ಕೇಂದ್ರ ಸರ್ಕಾರ ಕೂಡಲೆ ತೈಲ ಮತ್ತು ಅಡುಗೆ ಅನಿಲ ಬೆಲೆಯನ್ನು ಇಳಿಸಬೇಕು. ಬೇಕಾಬಿಟ್ಟಿ ಏರಿಸಿರುವ ತೆರಿಗೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಕಾರದಲ್ಲಿದ್ದಾಗ ಅಂತಾರಾಷೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸಿರಲಿಲ್ಲ. ಆದರೆ ಈಗ ಅಂತಾರಾಷೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಇಳಿಕೆಯಾಗಿದ್ದರೂ ಕೂಡ ಏರಿಸಲಾಗಿದೆ. ಭಾವನಾತ್ಮಕ ವಿಷಯಗಳ ಮೇಲೆ ಬಡವರ ಮೇಲೆ ದಾಳಿ ನಡೆಸುತ್ತಿರುವ ಕೇಂದ್ರ ಸರ್ಕಾರ ತನ್ನ ಭಕ್ತರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ಗಳನ್ನು ತೆರೆದು ಅವರ ಹತ್ತಿರ ಎಷ್ಟು ಬೇಕಾದರೂ ತೆರಿಗೆ ವಸೂಲು ಮಾಡಲಿ ಆದರೆ ಬಡವರಿಗೆ ಮಾತ್ರ ತೈಲಬೆಲೆ ಇಳಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್ .ಪ್ರಸನ್ನ ಕುಮಾರ್, ವಿಶ್ವನಾಥ್ ಕಾಶಿ, ರಂಗನಾಥ್, ರವಿಕುಮಾರ್, ಮಂಜುಳಾ ಶಿವಣ್ಣ, ನವೀನ್, ದೇವೇಂದ್ರಪ್ಪ, ಕುಮಾರೇಶ್, ರಂಗೇಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.