ಶಿವಮೊಗ್ಗ: ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಧನ ಘೋಷಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಯಾರಾದರೂ ಮಹಾಮಾರಿ ಕೊರೊನಾಕ್ಕೆ ಬಲಿಯಾದರೆ ಅಂತಹವರ ಕುಟುಂಬಕ್ಕೆ ಒಂದು ಲಕ್ಷ ರೂ. ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಈ ಕುಟುಂಬದಲ್ಲಿ ವಯಸ್ಕರು ಮೃತಪಟ್ಟಿದ್ದರೆ ಅವರ ಹೆಸರಿನಲ್ಲಿ ಓರ್ವರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕೋವಿಡ್ ನಿಂದ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದಾರೆ. ಪರಿಣಾಮ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ಕುಟುಂಬಗಳ ನೆರವಿಗಾಗಿ ಪರಿಹಾರ ಧನ ನೀಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 25-30 ಸಾವಿರ ಕುಟುಂಬಕ್ಕೆ ಅನುಕೂಲವಾಗಲಿದೆ. ಈ ಯೋಜನೆ ಅನುಷ್ಠಾನದಿಂದಾಗಿ ಸರ್ಕಾರಕ್ಕೆ 250-300 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಯೋಜನೆಯನ್ನು ಅನುಷ್ಠಾನಕ್ಕೆ ತಂದ ದೇಶದಲ್ಲಿಯೇ ಮೊದಲ ರಾಜ್ಯ ನಮ್ಮದಾಗಲಿದೆ ಎಂದ ಅವರು, ನೊಂದವರ, ಬಡವರ ಸಂಕಷ್ಟಕ್ಕೆ ಸರ್ಕಾರ ಸಕಾಲಿಕವಾಗಿ ಸ್ಪಂದಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಬಡವರ ಸಂಕಷ್ಟ ಅರಿತು ಅವರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.