ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಗಾಯಗೊಂಡು ಬಾರದ ಲೋಕಕ್ಕೆ ಸಂಚಾರ ಬೆಳೆಸಿದ ನಟ ಸಂಚಾರಿ ವಿಜಯ್‌ಗೆ ಶಿವಮೊಗ್ಗ ಜಿಲ್ಲೆಯೊಂದಿಗೆ ಉತ್ತಮ ನಂಟು ಇತ್ತು. ಕುಪ್ಪಳ್ಳಿಯ ಕವಿಶೈಲ ವಿಜಯ್ ನೆಚ್ಚಿನ ತಾಣಗಳಲ್ಲೊಂದು. ಶಿವಮೊಗ್ಗದ ಹೊಟೇಲ್ ಒಂದರ ತಿಂಡಿ ಇವರಿಗೆ ಅಚ್ಚುಮೆಚ್ಚು.
ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಸಂಚಾರಿ ವಿಜಯ್‌ಗೆ ಮೊದಲ ನಾಗರಿಕ ಸನ್ಮಾನವಾಗಿದ್ದು ಸಹ ಜಿಲ್ಲೆಯ ಭದ್ರಾವತಿಯಲ್ಲಿ. ಸಂಚಾರಿ ವಿಜಯ್ ಅವರಿಗೆ ರಾಜ್ಯದ ವಿವಿಧೆಡೆ ಗೆಳೆಯರ ಬಳಗವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಆಪ್ತರ ಪೈಕಿ ಒಬ್ಬರು ಶಂಕರ್ ಮಿತ್ರ. ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಇವರನ್ನು ಭೇಟಿಯಾಗುತ್ತಿದ್ದರು. ಒಟ್ಟಿಗೆ ಸುತ್ತಾಡುತ್ತಿದ್ದರು. ಮಲೆನಾಡಿನ ಊಟ, ತಿಂಡಿ ಸಂಚಾರಿ ವಿಜಯ್ ಅವರಿಗೆ ಬಹಳ ಇಷ್ಟ ಎಂದು ಶಂಕರ್ ಮಿತ್ರ ಸ್ಮರಿಸಿಕೊಳ್ಳುತ್ತಾರೆ.
ನೀರ್ ದೋಸೆ, ಚಟ್ನಿಯನ್ನು ತುಂಬಾ ಇಷ್ಟಪಡುತ್ತಿದ್ದರು. ಹೊಟೇಲ್ ಮೀನಾಕ್ಷಿ ಭವನದ ದೋಸೆ, ಮೊಸರು ಅವಲಕ್ಕಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲ ನೆನಪು ಮಾಡಿಕೊಂಡು ಅಲ್ಲಿಗೆ ತೆರಳಿ ತಮ್ಮ ಇಷ್ಟ ಖಾದ್ಯ ಸವಿಯುತ್ತಿದ್ದರು. ಇದಲ್ಲದೆ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದ ಫುಟ್ ಪಾತ್ ಮೇಲೆ ಗಾಡಿಯಲ್ಲಿ ಮಾಡುವ ಪಡ್ಡು ಇಷ್ಟ ಪಡುತ್ತಿದ್ದರು.
ಇಲ್ಲಿಗೆ ಬಂದಾಗ ಎರಡು ಪ್ಲೇಟ್ ಪಡ್ಡು ತಿಂದರಷ್ಟೆ ಅವರಿಗೆ ಸಮಾಧಾನವಾಗುತ್ತಿತ್ತು ಎಂದು ಶಂಕರ್ ಸ್ಮರಿಸುತ್ತಾರೆ. ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಸಂಚಾರಿ ವಿಜಯ್ ಅವರಿಗೆ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಇಲ್ಲಿನ ಎಂಪಿಎಂ ರಂಗಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಕೆ. ಸಂಗಮೇಶ್ವರ್ ಮತ್ತು ಅಪ್ಪಾಜಿಗೌಡರ ಉಪಸ್ಥಿತಿಯಲ್ಲಿ ಸನ್ಮಾನ ಮಾಡಲಾಗಿತ್ತು. ನಟ ಸಂಚಾರಿ ವಿಜಯ್ ಅವರು ಅವಕಾಶ ಸಿಕ್ಕಾಗಲೆಲ್ಲ ಕುಪ್ಪಳ್ಳಿಗೆ ಭೇಟಿ ನೀಡುತ್ತಿದ್ದರು. ಕವಿಶೈಲವನ್ನು ತುಂಬಾ ಇಷ್ಟಪಡುತ್ತಿದ್ದರು ಎನ್ನುತ್ತಾರೆ ಶಂಕರ್ ಮಿತ್ರ.
ರಾಷ್ಟ್ರ ಕವಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ ಸ್ಥಳಕ್ಕೆ ಹೋಗಿ ನಮಸ್ಕರಿಸಿ ಮೌನಕ್ಕೆ ಶರಣಾಗುತ್ತಿದ್ದರು. ಇದಲ್ಲದೆ ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗನ್ನು ಕಂಡು ಸಮಯ ಕಳೆಯಬೇಕು ಎಂದು ವಿಜಯ್ ಹೇಳಿದ್ದರು ಎಂದು ಶಂಕರ್ ನೆನಪಿಸಿಕೊಳ್ಳುತ್ತಾರೆ. ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ದೇವಸ್ಥಾನ, ಶರಾವತಿ ಹಿನ್ನೀರಿನ ಲಾಂಚ್‌ನಲ್ಲಿ ಸಂಚರಿಸೋದು ವಿಜಯ್‌ಗೆ ಬಲು ಅಚ್ಚುಮೆಚ್ಚು. ನಾತಿಚರಾಮಿ ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು.
ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಈ ತಂಡದಲ್ಲಿದ್ದರು. ನಟ ಸಂಚಾರಿ ವಿಜಯ್ ಅವರು “ಆ್ಯಕ್ಟ್ 1978′ ಸಿನಿಮಾದ ಪ್ರಮೋಷನ್‌ಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಸಿಟಿ ಸೆಂಟರ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸಲಾಗಿತ್ತು. ಪ್ರತಿ ಬಾರಿ ಶಿವಮೊಗ್ಗಕ್ಕೆ ಬಂದಾಗಲೂ ಇಲ್ಲಿಯ ರಂಗ ತಂಡಗಳು, ರಂಗ ಕರ್ಮಿಗಳನ್ನು ಭೇಟಿಯಾಗಲು ಇಷ್ಟಪಡುತ್ತಿದ್ದರು ಎಂದು ಶಂಕರ್ ಮಿತ್ರ ಸ್ಮರಿಸಿಕೊಳ್ಳುತ್ತಾರೆ. ಶಿವಮೊಗ್ಗದ ಜೊತೆ, ಇಲ್ಲಿಯ ರಂಗಕರ್ಮಿಗಳು ಸೇರಿದಂತೆ ಹಲವರ ಜೊತೆ ಉತ್ತಮ ನಂಟು ಹೊಂದಿದ್ದರು. ಅವರ ಅಕಾಲಿಕ ಮರಣ ಅರಗಿಸಿಕೊಳ್ಳಲಾಗದ್ದು. ಉತ್ತಮ ಸ್ನೇಹಿತರ ಬಳಗಕ್ಕೆ ಸಂಪಾದಿಸಿದ್ದ ವಿಜಯ್ ಇನ್ನು ಬರೀ ನೆನಪು.