ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಎದುರಾಗಿರುವ ಸಮಸ್ಯೆಗಳಿಗೆ ಕಂಡುಕೊಳ್ಳಲಾದ ತುರ್ತು ಪರಿಹಾರ ಕಾರ್ಯಗಳ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಸಮೀಪದ ಹಸೂಡಿ ಗ್ರಾಮಕ್ಕೆ ಜಿಪಂ ಅ ಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿ ಗಳು ಹಾಗೂ ಅಧಿ ಕಾರಿಗಳಿಂದ ಮಾಹಿತಿ ಪಡೆದರು. ಕೊರೊನಾಮುಕ್ತ ಗ್ರಾಪಂ ಆಗಿ ಮಾಡುವ ನಿಟ್ಟಿನಲ್ಲಿ ಸೋಂಕಿತರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ಸೋಂಕಿತರು ಎದೆಗುಂದದಂತೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿಬ್ಬಂದಿ, ಟಾಸ್ಕ್ಫೋರ್ಸ್, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕಾರ್ಯ ಪ್ರಶಂಸನೀಯ ಎಂದರು.
ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುವ ಜೀವರಕ್ಷಕ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವಂತೆ ಹಾಗೂ ಗುಣಮುಖವಾಗಿ ಬರುವ ವ್ಯಕ್ತಿಗಳನ್ನು ಮೊದಲಿನಂತೆ ಸಾಮಾಜಿಕವಾಗಿ ಗೌರವಿಸುವಂತೆ ಸೂಚಿಸಿದ ಅವರು, ಉದ್ಯೋಗ ಚೀಟಿ ಪಡೆದಿದ್ದಲ್ಲಿ ಅವರಿಗೆ ಉದ್ಯೋಗಾವಕಾಶ ನೀಡುವಂತೆ ಪಿಡಿಒಗೆ ಸೂಚಿಸಿದರು.
ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೆರೆಕಟ್ಟೆ ಕಾಲುವೆಗಳನ್ನು ತಹಶೀಲ್ದಾರರಿಂದ ಸಮೀಕ್ಷೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಿದ ಅವರು, ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಸಹಕಾರ ಪಡೆಯುವಂತೆ ಸೂಚಿಸಿದರು. ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ-ಕಾಲುವೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ರೈತರ ಹೊಲದಲ್ಲಿ ಬದುಗಳ ನಿರ್ಮಾಣಕ್ಕೂ ಉದ್ಯೋಗ ಖಾತ್ರಿಯಲ್ಲಿ ಅವಕಾಶ ನೀಡಲಾಗಿದೆ.
ಕಳೆದ ಸಾಲಿನಲ್ಲಿ ರಾಜ್ಯಕ್ಕೆ 13.ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಆದರೆ, ರಾಜ್ಯ ಸರಕಾರ ಕೊರೊನಾ ಸಂದರ್ಭ ಬಳಸಿಕೊಂಡು ಸುಮಾರು 15 ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಪೂರೈಸಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ 800 ಕೋಟಿ ರೂ.ಗಳ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿತ್ತು ಎಂದರು.
ಪ್ರಸ್ತುತ ಹಸೂಡಿ ಗ್ರಾಪಂ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು. ಕಾರ್ಯಕ್ರಮದ ನಂತರ ಅಲ್ಲಿನ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ, ಜಿಪಂ ಅಧ್ಯಕ್ಷೆ ಶಾಂತಮ್ಮ, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಪಿ.ಡಿ.ಒ. ರಾಜಪ್ಪ ಮತ್ತಿತರರು ಇದ್ದರು.