ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೂ ಫುಡ್ ಕಿಟ್ ವಿತರಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ಬುಧವಾರ ಪಾಲಿಕೆ ಮಹಾಪೌರರಿಗೆ ಮನವಿ ಸಲ್ಲಿಸಿತು. ಕೋವಿಡ್ 2ನೇ ಅಲೆ ಉಲ್ಬಣಗೊಂಡಿದೆ.
ಯಾವುದೇ ಅಂಗಡಿ, ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ತುಂಬಾ ತೊಂದರೆಯಾಗಿರುತ್ತದೆ. ಈ ವ್ಯಾಪಾರವನ್ನೇ ನಂಬಿಕೊಂಡು ಊಟ ಮಾಡುತ್ತಿದ್ದೆವು. ಆದರೆ ಈಗ ಯಾವ ವ್ಯಾಪಾರವೂ ಇಲ್ಲದೆ ಕಂಗೆಟ್ಟಿದ್ದೇವೆ ಎಂದು ಮನವಿದಾರರು ಅಳಲು ತೋಡಿಕೊಂಡರು.
ಹಾಲು, ತರಕಾರಿ, ದಿನಸಿ, ಮಾಂಸ, ಔಷ ಧ ಮುಂತಾದ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಂದೇ ದುಡಿದು ತಿನ್ನುವ ಬೀದಿ ಬದಿ ವ್ಯಾಪಾರಿಗಳಿಗೆ ಈಗ ದುಡಿಮೆಯೇ ಇಲ್ಲವಾಗಿದೆ, ಹಣವೂ ಇಲ್ಲವಾಗಿದೆ. ಎಷ್ಟೋ ಜನ ಬೀದಿ ಬದಿ ವ್ಯಾಪಾರಿಗಳು ಇಂದಿರಾ ಕ್ಯಾಂಟೀನ್ ಹಾಗೂ ದಾನಿಗಳು ನೀಡುವ ಆಹಾರದ ಪೊಟ್ಟಣಗಳಿಗಾಗಿ ಕಾಯುತ್ತಿದ್ದಾರೆ.
ಇನ್ನು ಕೆಲವರು ತಮ್ಮ ಕಷ್ಟಗಳನ್ನು ಯಾರ ಹತ್ತಿರವೂ ಹೇಳದೆ ಸ್ವಾಭಿಮಾನದಿಂದ ದುಡಿದು ತಿನ್ನುವ ಅವಕಾಶವೂ ಇಲ್ಲದೆ ಹಸಿವನ್ನು ನುಂಗುತ್ತಾ ಮೌನವಾಗಿ ಇದ್ದಾರೆ ಎಂದು ನೋವು ವ್ಯಕ್ತಪಡಿಸಿದರು. ಹೀಗಾಗಿ ಬೀದಿ ಬದಿ ವ್ಯಾಪಾರಿಗಳಿಗೂ ಫುಡ್ ಕಿಟ್ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಪ್ರಮುಖರಾದ ಬಿ.ಶೇಷಯ್ಯ, ನಾರಾಯಣ, ಗೋಪಾಲ, ಬಿ.ಕೇಶವಮೂರ್ತಿ, ಇರ್ವಾನ್ ಪಾಷ, ಇಸ್ಮಾಯಿಲ್, ಮಂಜುನಾಥ್ ಸೇರಿದಂತೆ ಹಲವರಿದ್ದರು.