Advertisement

ಎಲ್ಲೆಡೆ ಕರ್ಫ್ಯೂ; ಆಸ್ಪತ್ರೆಯಲ್ಲಿ ವಿಪರೀತ ರಷ್‌!

08:04 PM May 12, 2021 | Shreeraj Acharya |

ಸಾಗರ: ಕಳೆದ ನಾಲ್ಕು ದಿನಗಳಿಂದ 750ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ತಾಲೂಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಉಪ ವಿಭಾಗೀಯ ಆಸ್ಪತ್ರೆ ತೀವ್ರ ಒತ್ತಡ ಅನುಭವಿಸುತ್ತಿದೆ. ಪೊಲೀಸ್‌ ನಾಕಾಬಂದಿಯ ಕಾರಣ ನಗರದ ಬಹುತೇಕ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಕಾಣಿಸುತ್ತಿವೆಯಾದರೆ, ಉಪ ವಿಭಾಗೀಯ ಆಸ್ಪತ್ರೆಯ ಪಾರ್ಕಿಂಗ್‌ ಪ್ರದೇಶ ಹಾಗೂ ಎದುರಿನ ಚಾಮರಾಜಪೇಟೆ ರಸ್ತೆಯಲ್ಲಿ ವಾಹನಗಳ ಜಾತ್ರೆಯೇ ಮಂಗಳವಾರ ಕಂಡುಬಂದಿತು. ಆರ್‌ಟಿಪಿಸಿಆರ್‌ಗೆ ಗಂಟಲು ದ್ರವದ ಸ್ಯಾಂಪಲ್‌ ಕೊಟ್ಟು ಮನೆಯಲ್ಲಿ ಹೋಂ ಕ್ವಾರಂಟೈನ್‌ ಆಗುವವರನ್ನು ಪಾಸಿಟಿವ್‌ ಬಂದಿದೆ ಎಂಬ ವರದಿ ಬಂದ ನಂತರ ಆಸ್ಪತ್ರೆಗೆ ಕರೆಸಲಾಗುತ್ತಿದೆ.

Advertisement

ಈ ವೇಳೆ ಭಯಭೀತ ಮನೆಯವರು ಸೋಂಕಿತರ ಜೊತೆ ಮೂರು ನಾಲ್ಕು ಜನ ಆಸ್ಪತ್ರೆಗೆ ಧಾವಿಸುವ ಸನ್ನಿವೇಶ ಕಂಡು ಬರುತ್ತಿದೆ. ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚುವ ಎಲ್ಲ ಸಾಧ್ಯತೆಗಳಿವೆ. ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿ ಸುವ ಹೆಚ್ಚಿನ ಮುಂಜಾಗ್ರತೆ ಕಾಣದ ಹಿನ್ನೆಲೆಯಲ್ಲಿ ಅಪರಿಚಿತರು, ಬೇರೆ ರೋಗಕ್ಕಾಗಿ ಚಿಕಿತ್ಸೆ ಪಡೆಯಬೇಕಾದವರು ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಓಡಾಡಿ ಅಪಾಯವನ್ನು ತಮ್ಮೆಡೆಗೆ ತಂದುಕೊಂಡಿರುವ ಘಟನೆಗಳೂ ನಡೆದಿವೆ. ಈ ನಡುವೆ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರಿಗೆ ಸಕಾಲದಲ್ಲಿ ಆಹಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ನೀಡಿದ ಊಟ, ತಿಂಡಿಗಳ ಗುಣಮಟ್ಟ ಸರಿ ಇರದ ಕಾರಣ ಬಹುತೇಕ ಸೋಂಕಿತರು ಆಹಾರ ಬಳಸದೆ ಎಸೆದಿದ್ದಾರೆ.

ಮಂಗಳವಾರ ಬೆಳಗ್ಗಿನ ತಿಂಡಿ 10 ಗಂಟೆ ಆದರೂ ಸರಬರಾಜು ಆಗಿರಲಿಲ್ಲ. ಶುಗರ್‌ ಖಾಯಿಲೆ ಇದ್ದವರು ಹೈರಾಣಾಗಿದ್ದಾರೆ. 10 ಗಂಟೆಯ ನಂತರ ಉಪ್ಪಿಟ್ಟು ಕೊಡಲಾಗಿದೆ.  ಚಹಾ ಸಹ ಮಂಗಳವಾರದಿಂದ ನೀಡಲಾಗುತ್ತಿಲ್ಲ ಎಂದು ರೋಗಿಗಳಿಗೆ ತಿಳಿಸಲಾಗಿದೆ. ಈ ನಡುವೆ ಚಹಾ ಹಾಗೂ ಎಳನೀರು ಕುಡಿಯುವುದಕ್ಕಾಗಿ ಸೋಂಕಿತರು ಆಸ್ಪತ್ರೆಯ ಆವರಣ ದಾಟಿ ನಗರದಲ್ಲಿ ಸಂಚರಿಸಿದ ಘಟನೆಗಳು ನಡೆದಿವೆ ಎಂಬ ಮಾತು ಕೇಳಿಬಂದಿದೆ. ಶುಕ್ರವಾರ, ಶನಿವಾರ ನೀಡಲಾಗಿದ್ದ ಆಹಾರ ಗುಣಮಟ್ಟದಾಗಿತ್ತು. ಆದರೆ ಭಾನುವಾರದಿಂದ ಆಹಾರದ ಗುಣಮಟ್ಟದ ಬಗ್ಗೆ ರೋಗಿಗಳು ತೀವ್ರ ತಕರಾರು ವ್ಯಕ್ತಪಡಿಸಿದ್ದಾರೆ.

ಕೆಲವರು ಹೊರಗಿನಿಂದ ಆಹಾರ ತರಿಸಿಕೊಂಡು ತಿಂದಿದ್ದಾರೆ. ಆದರೆ ಈ ಕ್ರಮದಿಂದ ಕೊರೊನಾ ಸೋಂಕು ಹೆಚ್ಚುವ ಅಪಾಯವೂ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ನಡುವೆ ಮಂಗಳವಾರವೂ ಸೋಂಕಿತರಿಗೆ ಮಧ್ಯಾಹ್ನದ ಊಟ 2-30ರ ನಂತರವಷ್ಟೇ ಲಭ್ಯವಾಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಚಪಾತಿ ಸಿಗುತ್ತಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

ಆರೋಗ್ಯ ಇಲಾಖೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಸಿಬ್ಬಂದಿ ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಶನಿವಾರದಿಂದ ಮಂಗಳವಾರದವರೆಗೆ ತಾಲೂಕಿನಲ್ಲಿ ಕ್ರಮವಾಗಿ 134, 184, 165, 264 ಪಾಸಿಟಿವ್‌ ಕಂಡುಬಂದಿದೆ. ಉಪ ವಿಭಾಗೀಯ ಆಸ್ಪತ್ರೆಯಲ್ಲಿ 115 ಬೆಡ್‌ಗಳು ಭರ್ತಿಯಾಗಿವೆ. ಈ ನಡುವೆ ಆಹಾರ ಒದಗಿಸುತ್ತಿದ್ದ ಹೊಟೇಲ್‌ನವರಿಗೂ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಹಾಗಾಗಿ ಮಂಗಳವಾರ ಆಸ್ಪತ್ರೆಯ ಸಿಬ್ಬಂದಿಯೇ ಆಹಾರವನ್ನು ಬಡಿಸುವ ಕೆಲಸ ಮಾಡಿದ್ದಾರೆ.

Advertisement

ಸಾಧ್ಯವಾದಷ್ಟು ಮಟ್ಟಿಗೆ ಆಹಾರದ ಗುಣಮಟ್ಟ ಕಾಪಾಡಲು ಪಣ ತೊಡಲಾಗಿದ್ದರೂ ಎಲ್ಲರಿಗೂ ಸೂಕ್ತ ಎನ್ನಿಸುವ ಆಹಾರ ಕೊಡುವುದು ಈಗಿನ ವ್ಯವಸ್ಥೆಯಲ್ಲಿ ಕಷ್ಟ ಸಾಧ್ಯ ಎಂದು ಆಸ್ಪತ್ರೆಯ ನಿಕಟವರ್ತಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next