ಶಿವಮೊಗ್ಗ: ಕೊರೊನಾ ಕಟ್ಟಿಹಾಕಲು ಸೋಮವಾರದಿಂದ ರಾಜ್ಯಾದ್ಯಂತ ಜಾರಿಯಾದ ಕೊರೊನಾ ಕರ್ಫ್ಯೂ ಕಠಿಣ ನಿಯಮಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಹಾಗೂ ತುರ್ತುಸೇವೆ ಹೊರತುಪಡಿಸಿ ಮಿಕ್ಕೆಲ್ಲ ವ್ಯಾಪಾರ ವಹಿವಾಟಿಗೆ 14 ದಿನಗಳ ಕಾಲ ನಿರ್ಬಂಧ ಹಾಕಲಾಗಿದೆ.
ಅನಗತ್ಯವಾಗಿ ಮನೆಯಿಂದ ಹೊರ ಬರುವವರಿಗೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದ್ದರೂ ಕೂಡ ಕೆಲವರು ಮಾರ್ಗಸೂಚಿ ಉಲ್ಲಂಘಿಸಿರುವುದು ನಡೆದಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಚಾಟಿ ಬೀಸಿದ್ದಾರೆ.
ಪೊಲೀಸ್ ಸರ್ಪಗಾವಲು: ಬೆಳಿಗ್ಗೆಯೇ ಶಿವಮೊಗ್ಗ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬಸ್ ಸ್ಟ್ಯಾಂಡ್ ವೃತ್ತ, ಹಾಲ್ಕೊಳ ವೃತ್ತ, ಎಎ ವೃತ್ತ, ಶಿವಪ್ಪ ನಾಯಕ ವೃತ್ತ, ಹೊಳೆಬಸ್‌ಸ್ಟಾಪ್, ಮಹಾವೀರ ವೃತ್ತ, ಗೋಪಿ ವೃತ್ತ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಶಿವಮೂರ್ತಿ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಹಲವು ವಾಹನ ಸೀಜ್: ಅನಗತ್ಯ ವಾಗಿ ರಸ್ತೆಗೆ ಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆಯಲ್ಲದೆ ಆಸ್ಪತ್ರೆ, ಔಷಧ ಖರೀದಿ ಮತ್ತಿತರ ತುರ್ತು ಸಂದರ್ಭದಲ್ಲಿ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲವರು ದಿನಸಿ, ಔಷಧಿ ಖರೀದಿ, ಆಸ್ಪತ್ರೆಗೆ ಹೋಗಬೇಕು ಹೀಗೆ ಕುಂಟು ನೆಪ ಇಟ್ಟುಕೊಂಡು ಕಾರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದು ಕಂಡುಬಂತು. ಇಂಥವರನ್ನು ತಡೆದು ವಿಚಾರಣೆ ನಡೆಸಿದ ಪೊಲೀಸರು ವಾಹನಗಳನ್ನು ಸೀಜ್ ಮಾಡುವ ಮೂಲಕ ಅನಗತ್ಯವಾಗಿ ರಸ್ತೆಗಿಳಿದವರಿಗೆ, ನಿಯಮ ಉಲ್ಲಂಘಿಸುವವರಿಗೆ ಮೊದಲ ದಿನವೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಆಟೋರಿಕ್ಷಾ, ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆ 11ರ ನಂತರ ಪಾಸ್ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿತ್ತು. ಆದರೂ ಕೂಡ ಕೆಲವರು ನಿಯಮ ಪಾಲನೆ ಮಾಡದೆ ರಸ್ತೆಯಲ್ಲಿ ದ್ವಿಚಕ್ರ ಹಾಗೂ ಕಾರುಗಳಲ್ಲಿ ಸಂಚಾರ ಮಾಡುತ್ತಿರುವುದು ಕಂಡುಬಂತು. ಕೆಲವೆಡೆ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಶಿವಮೊಗ್ಗ ನಗರದ ಪ್ರಮುಖ ವ್ಯಾಪಾರ ಪ್ರದೇಶಗಳಾದ ಗಾಂಧಿ ಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ, ಜೈಲು ರಸ್ತೆ, ಕುವೆಂಪು ರಸ್ತೆ, ಗಾರ್ಡನ್ ಏರಿಯಾ, ಶಂಕರ ಮಠ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಕಡೆ ವ್ಯಾಪಾರ-ವಹಿವಾಟು ಬಂದ್ ಮಾಡಲಾಗಿತ್ತು. ಲಾಕ್‌ಡೌನ್ ಗೆ ವರ್ತಕರಿಂದ ಬೆಂಬಲ ದೊರಕಿತು. ಅಂಚೆ ಕಚೇರಿ, ದೂರವಾಣಿ, ಬ್ಯಾಂಕ್, ಮೆಸ್ಕಾಂ, ಆಸ್ಪತ್ರೆಗಳು ಕಾರ್ಯ ನಿರ್ವಹಿಸಿದವು.
ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೋವಿಡ್ -19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ಉದ್ದೇಶಿಸಿದ್ದರೆ, ಮಾರ್ಗಸೂಚಿ ಧಿಕ್ಕರಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಿದೆ.