ಶಿವಮೊಗ್ಗ: ಕೋವಿಡ್ ನಿಯಂತ್ರಿಸಲು ಮೇ 10 ರಿಂದ 14 ದಿನಗಳ ಕಾಲ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು, ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಶನಿವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಏನೇ ಕ್ರಮ ಕೈಗೊಂಡರು ಸಹ ಜನಜಾಗೃತಿ ಆಗುತ್ತಿಲ್ಲ. ಮೇ 10 ರಿಂದ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪರಿಣಾಮರಿಯಾಗಿ ಜಾರಿ ಮಾಡಬೇಕಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ಡಿಸಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖೆಯ ಎಲ್ಲಾ ವರ್ಗದ ಅ ಧಿಕಾರಿಗಳು, ಪಾಲಿಕೆ ಅ ಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ನಗರಸಭೆ, ಸ್ಥಳೀಯ ಸಂಸ್ಥೆ ಅ ಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ಸಭೆಯಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಅ ಧಿಕಾರಿಗಳು ಭಾಗವಹಿಸಲಿದ್ದು, ಮೇ 10 ರಿಂದ ಜಿಲ್ಲೆಯಲ್ಲಿ ಕಠಿಣ ರೀತಿಯ ನಿಯಮ ಜಾರಿ ಮಾಡಲು ಚರ್ಚೆ ನಡೆಸಲಾಗುವುದು ಎಂದರು. ಕೋವಿಡ್ ನಿಯಂತ್ರಿಸಲು ಶಿವಮೊಗ್ಗ ಜಿಲ್ಲೆಯಲ್ಲಿ ಅ ಧಿಕಾರಿಗಳು ತುಂಬಾ ಪರಿಣಾಮಕಾರಿಯಾಗಿ ಶ್ರಮಿಸುತ್ತಿದ್ದಾರೆ. ಆದರೂ ಜನಜಾಗೃತರಾಗದ ಹೊರತು ಸಾಧನೆ ಮಾಡಲು ಆಗುವುದಿಲ್ಲ. ಈ ಹಿಂದಿನ ಜನತಾ ಕರ್ಫ್ಯೂ ವೇಳೆ ರಸ್ತೆಯಲ್ಲಿ ವಿನಾಕಾರಣ ಓಡಾಡುವ ಬೈಕ್, ಆಟೋಗಳನ್ನು ಸೀಜ್ ಮಾಡಲಾಗಿತ್ತು. ಆದರೂ ಕೂಡ ಜನ ಓಡಾಡುತ್ತಲೇ ಇದ್ದರು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸಮರ್ಥವಾಗಿ ಕೋವಿಡ್ ನಿಯಂತ್ರಿಸಲು ಸರ್ಕಾರ ಶ್ರಮಿಸುತ್ತಿದೆ. ಇದರ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರುತ್ತಿರುವುದು ಸಂತೋಷದ ವಿಷಯವಾಗಿದೆ. ಸೇವಾ ಭಾರತಿ, ಐಎಂಎ, ಕೋವಿಡ್ ಸುರûಾ ಪಡೆಗಳು ರೋಗಿಗಳ ನೆರವಿಗೆ ಬರುತ್ತಿವೆ. ಇದು ಸ್ವಾಗತಾರ್ಹವಾದುದು. ಹಾಗೆಯೇ ಧಾರ್ಮಿಕ ಮಠಗಳು ಕೂಡ ತಮ್ಮ ಶಕ್ತಿ ಮೀರಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಯಾವ ತೊಂದರೆಯೂ ಇಲ್ಲ. ಆಕ್ಸಿಜನ್, ವೆಂಟಿಲೇಟರ್, ಔಷಧಗಳು, ಹಾಸಿಗೆ ಸೇರಿದಂತೆ ಅಗತ್ಯ ಕ್ರಮವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಜನ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜನಸ್ಪಂದನೆ ಇಲ್ಲದ ಹೊರತು ನಾವೇನು ಮಾಡಿದರೂ ಪರಿಣಾಮಕಾರಿಯಾಗುವುದಿಲ್ಲ ಎಂದ ಅವರು, ಕೋವಿಡ್‌ನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡುವ ಕುರಿತಂತೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೋವಿಡ್ ಪಡೆ ಹಾಗೂ ಸೇವಾ ಭಾರತಿ ಕೈಗೊಂಡಿರುವ ಸೇವಾ ಚಟುವಟಿಕೆಯ ನಿಯಂತ್ರಣ ಕೊಠಡಿಗೆ ನಿನ್ನೆ ಒಂದೇ ದಿನ 650 ಕರೆಗಳು ಬಂದಿದ್ದು, ಅಗತ್ಯ ಇರುವ ಎಲ್ಲರಿಗೂ ಬೆಡ್, ಆಕ್ಸಿಜನ್, ಊಟದ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರ ನಿರಂತರವಾಗಿ ಕೆಲಸ ಮಾಡಲಿದೆ ಎಂದರು. ಕ್ಯಾಂಪ್ಕೋ ಸಹಕಾರ ಸಂಘದಿಂದ ಆಕ್ಸಿಜನ್‌ಗಾಗಿ 6 ಲಕ್ಷ ರೂ. ಚೆಕ್‌ನ್ನು ಸಹಕಾರ ಭಾರತಿ ಮತ್ತು ಕೋವಿಡ್ ಸೇವಾ ಕೇಂದ್ರಕ್ಕೆ ನೀಡಲಾಗಿದೆ. ಇದೇ ರೀತಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡುವಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಆರ್‌ಎಸ್ ಎಸ್ ಪ್ರಮುಖ ಪಟ್ಟಾಭಿರಾಮ್, ಅಮೃತ್ ನೋನಿ ಟ್ರಸ್ಟ್ ಸಂಸ್ಥಾಪಕ ಶ್ರೀನಿವಾಸ್‌ಮೂರ್ತಿ ಉಪಸ್ಥಿತರಿದ್ದರು.