ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷé ತೋರುವ ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿ ವರ್ತನೆ ಅಕ್ಷಮ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿಯೊಂದಿಗೆ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಸಿಮ್ಸ್ ಆಡಳಿತಾಧಿ ಕಾರಿಗಳು, ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ವೈದ್ಯಾಧಿ ಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.
ಮಹತ್ವದ ಸಭೆಗೆ ಗೈರುಹಾಜರಾಗಿರುವ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಿಮ್ಸ್ ಆಡಳಿತಾ ಧಿಕಾರಿಗಳಿಗೆ ತಿಳಿಸಿದರು.
ಶಿಫ್ಟ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಡಿ.ಗ್ರೂಪ್, ನರ್ಸ್ ಮತ್ತು ಇತರೆ ವಿಭಾಗಗಳ ಸಿಬ್ಬಂದಿ ಹಾಜರಾತಿಯನ್ನು ಸಂಬಂ ಧಿಸಿದ ಅ ಧಿಕಾರಿಗಳು ಗಮನಿಸಬೇಕು. ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಕಾರ್ಯಕ್ಕಾಗಿ ಬಳಕೆಯಾಗುತ್ತಿರುವ ಸಿಬ್ಬಂದಿ, ಲಭ್ಯವಿರುವ ಲಸಿಕೆ, ಹಾಸಿಗೆಗಳು, ಕೊರೊನಾ ಹೊರತುಪಡಿಸಿ ಇತರೆ ಕಾಯಿಲೆಯಿಂದ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ವೈದ್ಯಾ ಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರನ್ನು ನೋಡಲು ಆಗಮಿಸುವ ಸಂಬಂ ಧಿಕರು ಪಿ.ಪಿ.ಇ ಕಿಟ್ ಧರಿಸುವುದು ಕಡ್ಡಾಯವಾಗಿದೆ. ದಿನಕ್ಕೆ 3-4ಬಾರಿ ರೋಗಿಯನ್ನು ಸಂದರ್ಶಿಸುವ ವ್ಯಕ್ತಿ ಪ್ರತಿ ಬಾರಿಯೂ ಪಿ.ಪಿ.ಇ ಕಿಟ್ ಹೊಸದನ್ನು ಖರೀದಿಸಿ, ಧರಿಸುವುದು ಸಾಧ್ಯವೇ?. ಈ ಪಿ.ಪಿ.ಇ ಕಿಟ್‌ಗಳು ಸುಲಭ ಬೆಲೆಯಲ್ಲಿ ದೊರೆಯುವುದಾದರೂ ಎಲ್ಲಿ? ಅಥವಾ ಒಮ್ಮೆ ಬಳಕೆದಾದ ಕಿಟ್ ಗಳೇ ಮತ್ತೆಮತ್ತೆ ಬಳಕೆಯಾಗುತ್ತಿವೆಯೇ?. ಇದರಿಂದಾಗಿ ಸೋಂಕು ಇನ್ನಷ್ಟು ಹರಡುವ ಆತಂಕವಿದೆ.
ಆದ್ದರಿಂದ ಸಾರ್ವಜನಿಕರಿಗೆ ಈ ಕಿಟ್‌ಗಳು ಸರಳವಾಗಿ, ಸುಲಭ ಬೆಲೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದವರು ನುಡಿದರು. ಈ ವಿಷಯಕ್ಕೆ ಸಂಬಂ ಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂ ಧಿಕರು ಹಾಗೂ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಊಟೋಪಹಾರ ಮತ್ತು ಅಗತ್ಯ ಸಹಕಾರ ಒದಗಿಸಲು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಮುಂದಾಗಿದ್ದು, ಆ ಸಂಸ್ಥೆಗಳು ಇನ್ನೂ ಒಂದೆರೆಡು ದಿನದಲ್ಲಿ ಕಾರ್ಯಾರಂಭ ಮಾಡಲಿವೆ.
ಅವರಿಗೆ ಸಿಮ್ಸ್ ಆಡಳಿತ ಮಂಡಳಿ ಅಗತ್ಯ ಸಹಕಾರ ನೀಡಬೇಕು ಎಂದು ಸೂಚಿಸಿದರು. ಆರೋಗ್ಯ ಸೇವೆಗೆ ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಉತ್ತಮ ಹೆಸರಿದೆ. ಅದಕ್ಕೆ ಕಪ್ಪುಚುಕ್ಕೆ ಬರದಂತೆ ಆರೋಗ್ಯ ಇಲಾಖೆಯ ಅ ಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ಎಂ.ಎಲ್.ವೈಶಾಲಿ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ರುದ್ರೇಗೌಡ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಡಿ.ಎಸ್. ಅರುಣ್, ಸಿಮ್ಸ್ ಆಡಳಿತಾಧಿಕಾರಿ ಡಾ| ಎಸ್.ಓ. ಸಿದ್ದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸರ್ಜನ್ ಡಾ| ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.