ತೀರ್ಥಹಳ್ಳಿ: ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸಮರ್ಥವಾಗಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಲಕ್ಷಣ ಕಂಡು ಬಂದರೆ ಗುಟ್ಟಾಗಿಡದೆ ಮನೆಯಲ್ಲಿಯೇ ಔಷಧಗಳನ್ನು ತೆಗೆದುಕೊಳ್ಳದೇ ಪರೀಕ್ಷೆಗೊಳಗಾಗಿ ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆದ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕ ರೋಗ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಮತ್ತು ತಹಶೀಲ್ದಾರ್ ಡಾ| ಶ್ರೀಪಾದ್ ಅವರ ನೇತೃತ್ವದ ತಂಡ ಕೊರೊನಾ ನಿಯಂತ್ರಣಕ್ಕೆ ವಿಶೇಷವಾಗಿ ಒಂದು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಜೆಸಿ ಆಸ್ಪತ್ರೆಯಲ್ಲಿ ಐವತ್ತು ಹಾಸಿಗೆಯನ್ನು ಕೊರೊನಾ ಸೋಂಕಿತರಿಗೆ ಮೀಸಲಿಟ್ಟಿದ್ದೇವೆ. ಅನೇಕ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಿಗೆ ಆಸ್ಪತ್ರೆಯ ಊಟ ಕೊಡದೆ ಉತ್ತಮ ಊಟವನ್ನು ಕೊಟ್ಟು ವಿಶೇಷವಾದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಐವತ್ತು ಬೆಡ್‌ಗಳಿಗೆ ಆಮ್ಲಜನಕದ ಸಂಪರ್ಕ ಮಾಡಲಾಗಿದೆ. ಸುಮಾರು ಹದಿನೆಂಟು ಜಂಬೋ ಸಿಲಿಂಡರ್ ಗಳಿವೆ. ಹನ್ನೆರಡು ಮಿನಿ ಸಿಲಿಂಡರ್ ಗಳಿವೆ. ಸದ್ಯಕ್ಕೆ ಆಮ್ಲಜನಕದ ತೊಂದರೆ ಇಲ್ಲ. ತಾಲೂಕಿನಲ್ಲಿ ವ್ಯಾಪಕ ಕೊರೊನಾ ಸೋಂಕು ಉಲ್ಬಣಿಸುತ್ತಿರುವುದನ್ನು ಗಮನಿಸಿ ದೇವಂಗಿ ಸಮೀಪದ ವಾಟಗಾರಿನ ಮೊರಾರ್ಜಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿದೆ. ಇಲ್ಲಿ 500 ಹಾಸಿಗೆಯ ವ್ಯವಸ್ಥೆ ಈಗಾಗಲೇ ಇದೆ. ಸದ್ಯಕ್ಕೆ ನೂರು ಬೆಡ್‌ಗಳ ಕೆಪಾಸಿಟಿಯ ಕೊವಿಡ್ ಸೆಂಟರ್ ಅನ್ನು ಮಾಡುತ್ತಿದ್ದೇವೆ ಎಂದರು.
ಪತ್ರಕರ್ತರಾದ ಡಾನ್ ರಾಮಣ್ಣ ಮಾತನಾಡಿ, ನಾವು ತಾಲೂಕಿನಲ್ಲಿ ಕೊರೊನಾ ಫಂಡ್ ಮಾಡಿ ಇದಕ್ಕೆ ಕೆಲವು ದಾನಿಗಳಿಂದ ಹೆಚ್ಚಿನ ಹಣವನ್ನು ತೆಗೆದುಕೊಂಡು ಆಮ್ಲಜನಕದ ಪ್ಲಾಂಟ್ ನ್ನು ತೀರ್ಥಹಳ್ಳಿಯಲ್ಲಿಯೇ ಮಾಡಿದಲ್ಲಿ ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ. ಹಣ ಕಲೆಕ್ಷನ್ ಮಾಡಲು ತೀರ್ಥಹಳ್ಳಿಯಲ್ಲಿ ಕೊರತೆಯಿಲ್ಲ. ಒಂದು ಕ್ರಿಕೆಟ್ ಟೂರ್ನಮೆಂಟ್ ಆದರೆ ಜನ ಅದಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಹಣ ನೀಡುತ್ತಾರೆ. ಹಾಗಿದ್ದಲ್ಲಿ ಕೊರೊನಾ ಫಂಡಿಗೆ ಹಣ ಕೊಡದೇ ಇರುವುದಿಲ್ಲ. ಇದಕ್ಕೆ ಒಂದು ವ್ಯವಸ್ಥಿತ ಸಮಿತಿಯನ್ನು ರಚನೆ ಮಾಡಿ ಕಾರ್ಯರೂಪಕ್ಕೆ ತರಬಹುದು. ಈ ಕೋರೊನ ಫಂಡ್‌ಗೆ ನಾನು 10000 ರೂಪಾಯಿಗಳನ್ನು ಇಂದೇ ಕೊಡುತ್ತೇನೆ ಎಂದು ತಿಳಿಸಿದರು.
ಇದಕ್ಕೆ ಶಾಸಕರು ಡಾನ್ ರಾಮಣ್ಣರವರಿಗೆ ಅಭಿನಂದನೆ ತಿಳಿಸಿ ತಜ್ಞರಲ್ಲಿ ಮಾಹಿತಿ ಪಡೆದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ ತಕ್ಷಣ ಕಾರ್ಯರೂಪಕ್ಕೆ ತರೋಣ ಎಂದು ತಿಳಿಸಿದರು. ತಹಶೀಲ್ದಾರ್ ಡಾ| ಶ್ರೀಪಾದ್, ಡಾ| ಅನಿಕೇತನ್ ಇದ್ದರು.