ತೀರ್ಥಹಳ್ಳಿ: ಕೊರೊನಾ ಪಿಡುಗು ಕೈ ಮೀರುತ್ತಿದ್ದು ಜನರು ಸ್ವಯಂ ಪ್ರೇರಿತರಾಗಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದ ಭೀಕರತೆಯನ್ನು ಊಹಿಸುವುದಕ್ಕೂ ಅಸಾಧ್ಯವಾದೀತು ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ.
ಗುರುವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಕೊರೊನಾ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಂದಿನವರೆಗೆ ಜಿಲ್ಲೆಯಲ್ಲಿ 12 ಸಾವಿರ ಪ್ರಕರಣಗಳು ದಾಖಲಾಗಿದ್ದು 12 ಕ್ಕಿಂತ ಹೆಚ್ಚಿನ ಸಾವು ಸಂಭವಿಸಿರುವುದು ದಿಗಿಲು ಹುಟ್ಟಿಸಿದೆ. ಆದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜಾಗೃತರಾಗಿ. ಈ ಮೂಲಕ ನಿಮಗೆ ಕೈ ಮುಗಿದು ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ಮುಂಜಾಗ್ರತೆ ವಹಿಸದೇ ನಿಮ್ಮ ಕುಟುಂಬವೂ ಸೇರಿದಂತೆ ಸಮಾಜಕ್ಕೆ ದ್ರೋಹ ಬಗೆಯದಿರಿ ಎಂದು ಮನವಿ ಮಾಡಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತಾಲೂಕಿನಲ್ಲಿ ಈ ವರೆಗೆ 130ಕ್ಕೂ ಅಧಿ ಕ ಪ್ರಕರಣ ದಾಖಲಾಗಿರುವುದು ಚಿಂತೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವಗಳು ಇಲ್ಲಿಗೆ ಬರುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.
ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಬೇರೆ ಜಿಲ್ಲೆಗಳಿಂದ ಬಂದವರು ಹೋಂ ಕ್ವಾರಂಟೈನ್ ಆಗದೇ ಇದ್ದಲ್ಲಿ ಅಂತವರನ್ನು ಕಡ್ಡಾಯವಾಗಿ ಗುರುತಿಸಿ ಕೊರೊನಾ ಸೆಂಟರ್‌ಗೆ ಕಳಿಸುವಂತೆಯೂ ಅ ಧಿಕಾರಿಗಳಿಗೆ ಸೂಚಿಸಿದರು.
ಟಿಎಚ್‌ಒ ಡಾ| ಅನಿಕೇತನ್ ಸಭೆಗೆ ಸಮಗ್ರ ವಿವರಣೆ ನೀಡಿದರು. ತಾಪಂ ಅದ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಜಿಪಂ ಸಿಇಒ ವೈಶಾಲಿ, ಡಿಎಚ್‌ಒ ಡಾ| ರಾಜೇಶ್ ಸುರಗಿಹಳ್ಳಿ ಇದ್ದರು. ತಹಶೀಲ್ದಾರ್ ಡಾ| ಎಸ್.ಬಿ. ಶ್ರೀಪಾದ ನಿರ್ವಹಿಸಿದರು.