Advertisement

ಆಸ್ಪತ್ರೆಗಳ ಗುಣಮಟ್ಟ ಹೆಚ್ಚಲಿ : ವಿರೇಶ್

10:14 PM Apr 28, 2021 | Shreeraj Acharya |

ಹೊಸನಗರ: ಮಹಾಮಾರಿ ಕೊರೊನಾ ತನ್ನ ಕಬಂಧ ಬಾಹುಗಳನ್ನು ಗ್ರಾಮೀಣ ಪ್ರದೇಶಗಳಿಗೂ ಚಾಚುತ್ತಿದ್ದು ಅದನ್ನು ನಿಗ್ರಹಿಸಲು ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿಡುವಂತೆ ಆರೋಗ್ಯ ಇಲಾಖೆಗೆ ತಾಪಂ ಅಧ್ಯಕ್ಷ ಆಲವಳ್ಳಿ ವೀರೇಶ್‌ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೊರೊನಾ ವಿಷಯವೇ ಪ್ರಮುಖವಾಗಿ ಚರ್ಚೆಗೆ ಬಂದಿತು. ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಹೀಗಾಗಿ ರೋಗಿಗಳಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂದು ಸದಸ್ಯರು ದೂರಿದರು. ರಿಪ್ಪನ್‌ಪೇಟೆ ಭಾಗದ ಖಾಸಗಿ ಆಸ್ಪತ್ರೆಗಳ ಬಾಗಿಲಲ್ಲಿ ಜನರು ಕ್ಯೂ ನಿಲ್ಲುವುದು ನೋಡಿದರೆ ಸರ್ಕಾರಿ ಆಸ್ಪತ್ರೆಯ ಗುಣಮಟ್ಟ ಎಂತವರಿಗೂ ಅರ್ಥವಾಗುತ್ತದೆ. ಅಲ್ಲಿಯ ವೈದ್ಯರು ಉತ್ತಮ ಪೊಲಿಟಿಷಿಯನ್‌ ತರ ಕಾಣುತ್ತಾರೆ ಎಂದು ಸ್ವತಃ ಅಧ್ಯಕ್ಷರೇ ಆರೋಪಿಸಿದರು. ಹೀಗಾಗಿ ರಿಪ್ಪನ್‌ ಪೇಟೆಗೆ ಹೆಚ್ಚುವರಿ ವೈದ್ಯರನ್ನು ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.

31766 ಜನರಿಗೆ ಲಸಿಕೆ: ಆರೋಗ್ಯ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಹಿರಿಯ ಆರೋಗ್ಯ ಸಹಾಯಕ ರಮೇಶ ಆಚಾರ್ಯ, ತಾಲೂಕಿನಲ್ಲಿ ಈವರೆಗೆ 45 ವರ್ಷಕ್ಕಿಂತ ಮೇಲ್ಪಟ್ಟ 31766 ಜನರಿಗೆ ಪ್ರಥಮ ಹಂತದ ಲಸಿಕೆ ನೀಡಲಾಗಿದೆ. ಎರಡನೇ ಹಂತದಲ್ಲಿ 1238 ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಜನವರಿಯಿಂದ ಈವರೆಗೆ 334 ಕರೊನಾ ಪಾಸಿಟಿವ್‌ ಪ್ರಕರಣ ಕಂಡು ಬಂದಿದೆ ಎಂದರು.

ಕರ್ಫ್ಯೂ ಗೊಂದಲ: ಕೊರೊನಾ ಕರ್ಫ್ಯೂ ವಿಚಾರದಲ್ಲಿ ಸರ್ಕಾರ ಹೊರಡಿಸುವ ಮಾರ್ಗಸೂಚಿ ಒಂದಾದರೆ.. ಇಲ್ಲಿಯ ಪೊಲೀಸರು ನಡೆದುಕೊಳ್ಳುವ ರೀತಿಯೇ ಬೇರೆ. ಒಂದೊಂದು ಕಡೆ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಿದ್ದು ಜನರು ಗೊಂದಲಕ್ಕೀಡಾಗಿದ್ದಾರೆ ಎಂದು ತಾಪಂ ಸದಸ್ಯ ಬಿ.ಜಿ. ಚಂದ್ರಮೌಳಿ ಆರೋಪಿಸಿದರಲ್ಲದೆ ಈ ಬಗ್ಗೆ ಪರಿಶೀಲಿಸಲು ಆಗ್ರಹಿಸಿದರು.

ಸಾಲ ನೀಡಲು 9 ಅಂಡ್‌ 11 ಸಾಕು: ಗ್ರಾಪಂನಿಂದ 9 ಅಂಡ್‌11 ಪಡೆದುಕೊಂಡ ಮೇಲೆ ಜನರ ನಿವೇಶನಕ್ಕೆ ಅದೇ ಸುಪ್ರೀಂ ಆದರೂ ಅದರ ಮೇಲೆ ಸಾಲ ನೀಡಲು ರಾಷ್ಟ್ರೀಯ ಬ್ಯಾಂಕ್‌ ಸರಿಯುತ್ತಿದ್ದು ಜನರಿಗೆ ತೊಂದರೆಯಾಗಿದೆ ಎಂದು ತಾಪಂ ಸದಸ್ಯ ಕೆ.ವಿ. ಸುಬ್ರಹ್ಮಣ್ಯ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಶ್ರೀವತ್ಸ್ ಆರ್‌ ಬಿಐ ಮಾರ್ಗಸೂಚಿಯಂತೆ ಬ್ಯಾಂಕ್‌ ಗಳು ಕಾರ್ಯ ನಿರ್ವಹಿಸಬೇಕು. ನಿವೇಶನದ ಖಾತೆ ಪ್ರಮಾಣ ಪತ್ರದ ಅಗತ್ಯವಿದೆ ಎಂದರು.

Advertisement

ಈ ವೇಳೆ ಗ್ರಾಪಂ ನೀಡುವ 9 ಅಂಡ್‌11 ಮತ್ತು ಹಕ್ಕುಪತ್ರ ಕುರಿತಾಗಿ ಸಾಕಷ್ಟು ಚರ್ಚೆ ನಡೆಯಿತು. ಈ ವೇಳೆ, ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ, ಆನ್‌ಲೈನ್‌ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಉಪಾಧ್ಯಕ್ಷೆ ಎಚ್‌.ಎಂ. ಸುಶೀಲಮ್ಮ ರಘುಪತಿ, ಸದಸ್ಯರಾದ ವಾಸಪ್ಪಗೌಡ, ಬಿ.ಕೆ. ಸರಸ್ವತಿ ಗಣಪತಿ, ಶಕುಂತಲಾ ರಾಮಚಂದ್ರ, ಶೋಭಾ ಮಂಜುನಾಥ್‌, ರುಕ್ಮಿಣಿರಾಜು ಮತ್ತಿತರರು ಇದ್ದರು. ತಾಪಂ ಇಒ ಸಿ.ಆರ್‌. ಪ್ರವೀಣ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next