ಭದ್ರಾವತಿ: ಮಂಗಳವಾರ ನಗರಸಭೆಯ 34 ವಾರ್ಡ್‌ಗಳ 138 ಮತಗಟ್ಟೆಗಳಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಶೇ. 61 ಮತದಾನ ಆಗಿದೆ. ಬೆಳಗ್ಗೆ ಮತದಾನ ಆರಂಭಗೊಂಡಾಗ ಹಳೆನಗರದ ಸಂಚಿಹೊನ್ನಮ್ಮ ಶಾಲೆ ಹಾಗೂ ಅದರ ಪಕ್ಕದ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟುಹೋಗಿದೆ ಎಂಬ ದೂರನ್ನು ಬಿಜೆಪಿ ಮುಖಂಡರು ಹೊತ್ತು ಮತಗಟ್ಟೆ ಅಧಿ ಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.
ನಂತರ ವಿಷಯ ಜಿಲ್ಲಾ ಧಿಕಾರಿಗಳವರೆಗೆ ತಲುಪಿ ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಬಿಜೆಪಿಯವರು ನಗರಸಭೆ ಚುನಾವಣೆಯ ಮತದಾರರ ಪಟ್ಟಿಯ ಬದಲಿಗೆ ವಿಧಾನಸಭೆ ಮತದಾರರ ಪಟ್ಟಿಯನ್ನು ನೋಡಿ ಅದನ್ನೇ ನಗರಸಭೆ ಮತದಾರರ ಪಟ್ಟಿ ಎಂದು ತಪ್ಪಾಗಿ ಅರ್ಥೈಸಿಕೊಂಡದ್ದು ಗೊಂದಲಕ್ಕೆ ಕಾರಣ ಎಂದು ತಿಳಿದು ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಸಮಸ್ಯೆಬಗೆ ಹರಿದು ಮತದಾನ ಸರಾಗವಾಗಿ ಸಾಗಿತು.
ಮತಗಟ್ಟೆ ಸಮೀಪ ಶಾಸಕರ ಠಿಕಾಣಿ: ಹಳೇನಗರದ ಕನಕಮಂಟಪ ಮೈದಾನದ ಎದುರಿನ ಸಂಚಿಹೊನ್ನಮ್ಮ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಕುರ್ಚಿ ಹಾಕಿಕೊಂಡು ಮದ್ಯಾಹ್ನದಿಂದ ಸಂಜೆಯವರೆಗೆ ಕುಳಿತು ಮತಗಟ್ಟೆಗೆ ಬರುವ ಮತದಾರರಿಗೆ ಕೈ ಮುಗಿದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕುವಂತೆ ಮತಯಾಚನೆ ಮಾಡುತ್ತಿದ್ದದ್ದು ಕಂಡುಬಂದಿತು. ನಾಲ್ಕನೆ ವಾರ್ಡಿನಲ್ಲಿ ಅವರ ಸೋದರನ ಪತ್ನಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಾರಣ ಶಾಸಕರು ಆ ಮತಗಟ್ಟೆಬಳಿ ಮತದಾನದ ಅವ ಧಿ ಮುಗಿಯುವವರೆಗೂ ಕುಳಿತಿದ್ದರು.
ಮತಗಟ್ಟೆಯಲ್ಲಿ ಸುವ್ಯವಸ್ಥೆ: ಕಾಗದನಗರ, ಉಜ್ಜನಿಪುರ, ಹುತ್ತಾ ಕಾಲೋನಿ, ಕವಲಗುಂದಿ, ಹಳೇನಗರ, ಹೊಸಮನೆ, ಅಣ್ಣಾನಗರ, ನೆಹರೂನಗರ, ಭೂತನಗುಡಿ, ಗಾಂಧಿಧೀನಗರ,ತಿಮ್ಲಾಪುರ, ಹುಡ್ಕೊà, ಆಂಜನೆಯ ಅಗ್ರಹಾರ, ಸುಭಾಷ್ ನಗರ, ಸುರಗಿತೋಪು, ಬೊಮ್ಮನಕಟ್ಟೆ, ಕೋಟೆಏರಿಯಾ ಸೇರಿದಂತೆ ಎಲ್ಲೆಡೆ ಮತಗಟ್ಟೆಗಳಲ್ಲಿ ಮತದಾರರಿಗೆ ಸ್ಕಿನ್ ಟೆಸ್ಟ್ ಮಾಡಿ ಕೈಗೆ ಸ್ಯಾನಿಟೈಸರ್ ಹಾಕಿ ಮತಗಟ್ಟೆ ಒಳಗೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಯ ಬಳಿ ಮತದಾರರು ಅಂತರ ಕಾಯ್ದುಕೊಂಡು ಸಾಲಾಗಿ ನಿಂತು ಮತ ಚಲಾಯಿಸಿದರು.
ಕೊರೊನಾ ಆತಂಕವಿಲ್ಲ: ಒಂದೆಡೆ ಚುನಾವಣಾ ಮತಗಟ್ಟೆಗಳಲ್ಲಿ ಇಲಾಖೆ ಕೊರೊನಾ ಮಾರ್ಗಸೂಚಿಯನ್ನು ಅಚ್ಚುಕಟ್ಟಾಗಿ ಪಾಲಿಸಿದರೆ, ಮತಗಟ್ಟೆಯ ಹೊರಗೆ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದ ಅವರ ಜನಗಳು ಕೊರೊನಾ ಸೋಂಕಿನ ಭೀತಿಯಿಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಾತ್ರೆಯಂತೆ ಸೇರಿ ಮತದಾರರ ಕೈ ಕುಲುಕಿ ಮತ ಯಾಚಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.