Advertisement

ಗಂಧಕ ಮಿಶ್ರಿತ ನೀರು ಕೆರೆಗೆ

08:51 PM Apr 27, 2021 | Shreeraj Acharya |

ಸೊರಬ: ಅಕಾಲಿಕ ಮಳೆಯಿಂದ ಶುಂಠಿ ಕಣದಲ್ಲಿದ್ದ ಗಂಧಕ ಮಿಶ್ರಿತ ನೀರು ಕೆರೆಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ಧಾರುಣವಾಗಿ ಸಾವಿಗೀಡಾಗಿವೆ ಎಂದು ಹಿರೇಶಕುನ ಗ್ರಾಮದ ಪ್ರಗತಿಪರ ಕೃಷಿಕ ಪರಶುರಾಮ ಸಣ್ಣಬೈಲು ಆರೋಪಿಸಿದರು.

Advertisement

ಪಟ್ಟಣದ ಹೊರವಲಯದ ಹಿರೇಶಕುನ ಗ್ರಾಮದ ಸ.ನಂ. 54ರಲ್ಲಿನ ಕ್ಯಾಂಪ್‌ ಕೆರೆಯಲ್ಲಿ ಭಾನುವಾರ ಬೆಳಗ್ಗೆ ಸಾಕಷ್ಟು ಮೀನುಗಳು ಸಾವನ್ನಪ್ಪಿವೆ. ಕೆರೆಯ ಸುತ್ತ ಸುಮಾರು ಐದಾರು ಶುಂಠಿ ಕಣಗಳಿದ್ದು, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಶುಂಠಿ ಒಣಗಿಸಲು ಬಳಸಿದ ರಾಸಾಯನಿಕ ವಸ್ತುವಾದ ಗಂಧಕವು ಮಳೆ ನೀರಿನೊಂದಿಗೆ ಬೆರೆತು ಕೆರೆ ಸೇರಿದ್ದರಿಂದ ಮೀನುಗಳು ಸಾವಿಗೀಡಾವಿವೆ ಎಂದರು. ಶುಂಠಿ ಕಣದಲ್ಲಿ ಬಳಸುವ ಗಂಧಕವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ವಸ್ತುವಾಗಿದೆ. ಇನ್ನು ಗಂಧಕದ ಹೊಗೆ ಸೇವಿಸಿದರೆ ಅಸ್ತಮಾದಂತಹ ಕಾಯಿಲೆ ಬರುವ ಸಾಧ್ಯತೆ ಸಾಕಷ್ಟಿದೆ ಎಂದು ವೈಜ್ಞಾನಿಕವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೇವಲ ಹಣ ಗಳಿಕೆಗಾಗಿ ಮತ್ತೂಬ್ಬರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಶುಂಠಿ ಕಣದವರ ಮೇಲೆ ಸಂಬಂಧಪಟ್ಟ ಅ ಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಕೆರೆಯಲ್ಲಿ ಮೀನು ಸಾಕಣೆಗೆಂದು ಕಳೆದ ಜುಲೈ ಸಂದರ್ಭದಲ್ಲಿ ಸುಮಾರು 5 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿತ್ತು. ಉತ್ತಮವಾಗಿ ಬೆಳೆದಿದ್ದ ಮೀನುಗಳು ಇದೀಗ ಸಾವಿರಾರು ಸಂಖ್ಯೆಯಲ್ಲಿ ದಿಢೀರನೆ ಸಾವಿಗೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯದ ಅಡುಗೆ ಮತ್ತು ಇತರೆ ಸಂದರ್ಭಗಳಲ್ಲಿ ಹಾಗೂ ಆಯುಷ್‌ ಇಲಾಖೆ ಹೇಳಿದಂತೆ ಕಷಾಯದಲ್ಲಿ ಶುಂಠಿಯನ್ನು ಬಳಸುತ್ತಿದ್ದೇವೆ. ಇಂತಹ ರಾಸಾಯನಿಕ ಮಿಶ್ರಿತ ಶುಂಠಿಯನ್ನು ಬಳಸುವುದರಿಂದ ಆರೋಗ್ಯದ ಮೇಲೆ ಭೀರಬಹುದಾದ ಗಂಭೀರ ಪರಿಣಾಮವನ್ನು ಪ್ರತಿಯೊಬ್ಬರೂ ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿ ಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next