ಶಿವಮೊಗ್ಗ: ರಾಜ್ಯ ಸರಕಾರ ಹೇರಿರುವ ಕರ್ಫ್ಯೂನಿಂದಾಗಿ ಬಡವರು, ವ್ಯಾಪಾರಿಗಳು ದಿಕ್ಕು ತೋಚಾದಾಗಿದ್ದಾರೆ. ಅವರಿಗೆ ಸರಕಾರ ಕೂಡಲೇ 25 ಸಾವಿರ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು. ಅವರ ಖಾತೆಗೆ ಜಮಾ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆಗ್ರಹಿಸಿದರು.
ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಆದರೆ, ದುಡಿಮೆಯೇ ಇಲ್ಲದೆ ಕಾರ್ಮಿಕರು ಬದುಕುವುದು ಹೇಗೆ ಎಂಬ ಬಗ್ಗೆಯೂ ಯೋಚಿಸಬೇಕು. ನಿತ್ಯ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಮಿಕರಿಗೆ ಕರ್ಫ್ಯೂದಿಂದಾಗಿ ಕೆಲಸವಿಲ್ಲದಂತಾಗಿದೆ. ಅವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಹೀಗಾಗಿ, ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಹೇಳಿದರು.
ದೇಶದಲ್ಲಿ ಸೋಂಕು ಏರುತ್ತಲೇ ಇದೆ. ಇದಕ್ಕೆ ನೇರ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರ. ಎರಡನೇ ಅಲೆಯ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಲ್ಲ. ಇದರಿಂದಾಗಿ, ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಗಲೂ ರೋಗಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿಲ್ಲ ಎಂದು ಆರೋಪಿಸಿದರು.
ಆಸ್ಪತ್ರೆಗಳಿಗೆ ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ನ್ಯಾಯಾಲಯಗಳು ಸಹ ಸರಕಾರಕ್ಕೆ ಸೂಚನೆ ನೀಡಿವೆ. ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೂ ಸ್ಥಿತಿ ಹಾಗೆಯೇ ಇದೆ. ಈ ಹಿಂದೆ ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ ಸೇರಿದಂತೆ ವಿಚಾರಗಳನ್ನು ಆಸ್ಪತ್ರೆಯಲ್ಲಿಯೇ ಪ್ರದರ್ಶಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿಲ್ಲ. ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇರ ಹೊಣೆ ಎಂದು ಟೀಕಿಸಿದರು.
ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗೆ ಅತ್ಯಗತ್ಯವಾಗಿ ಬೇಕಾದ ರೆಮ್‌ಡಿಸಿವರ್ ಇಂಜೆಕ್ಷನ್‌ಗಳ ಕೊರತೆ ರಾಜ್ಯದೆಲ್ಲೆಡೆ ಇದೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಇಂತಹ ಅಮೂಲ್ಯ ಇಂಜೆಕ್ಷನ್‌ಗಳು ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಲಭ್ಯವಾಗಿವೆ. ಇದು ದುರಾಡಳಿತವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ರಾಜ್ಯದ ಹಲವೆಡೆ ನಕಲಿ ರೆಮ್‌ಡಿಸಿವರ್ ಗಳನ್ನು ವಿತರಿಸಲಾಗುತ್ತಿದೆ. ಇವುಗಳನ್ನು ನಿಗ್ರಹಿಸಬೇಕಾದ ಸರಕಾರ ಸುಮ್ಮನಿರುವುದು ವೈಫಲ್ಯವಲ್ಲದೆ ಮತ್ತೇನು. ಕೊರೊನಾವನ್ನು ಕೇಂದ್ರ ಮತ್ತು ರಾಜ್ಯಕ್ಕೆ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು ಕಾಂಗ್ರೆಸ್ ಮುಖಂಡರಾದ ಚಂದ್ರಭೂಪಾಲ್, ಸೌಗಂಧಿ ಕ ಇತರರಿದ್ದರು.