Advertisement

“ಸಪ್ತಪದಿ’ಗೆ ಕೊರೊನಾ ಗ್ರಹಣ!

06:52 PM Apr 25, 2021 | Shreeraj Acharya |

„ಶರತ್‌ ಭದ್ರಾವತಿ

Advertisement

ಶಿವಮೊಗ್ಗ: ಬಡವ ಹಾಗೂ ಮಧ್ಯಮ ವರ್ಗದ ಮದುವೆಗೆ ಆಸರೆಯಾಗಿದ್ದ “ಸಪ್ತಪದಿ’ ಯೋಜನೆಗೆ ಕೊರೊನಾ ಗ್ರಹಣ ಆವರಿಸಿದೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ 195 ಜೋಡಿ ವಿವಾಹವಾಗಿದ್ದು, ಏಪ್ರಿಲ್‌ನಲ್ಲಿ ಬೆರಳೆಣಿಕೆಯಷ್ಟು ಮಂದಿ ನೋಂದಣಿ ಮಾಡಿಸಿದ್ದಾರೆ. ಸರಳ ವಿವಾಹ ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಕಳೆದ ವರ್ಷ “ಸಪ್ತಪದಿ’ ಯೋಜನೆ ಘೋಷಣೆ ಮಾಡಿತ್ತು.

ಕೋವಿಡ್‌ ಕಾರಣದಿಂದ ಡಿಸೆಂಬರ್‌ ನಿಂದ ಆರಂಭವಾದ ಈ ಯೋಜನೆಗೆ ಸ್ವಲ್ಪಮಟ್ಟಿನ ಉತ್ಸಾಹ ಕಂಡು ಬಂದಿತ್ತು. ಏಪ್ರಿಲ್‌ನಲ್ಲಿ ತೀರಾ ನಿರಾಶದಾಯಕವಾಗಿದೆ. ಮಕ್ಕಳ ಮದುವೆಗೆ ಬಂಗಾರ, ಕಲ್ಯಾಣ ಮಂಟಪ, ಊಟೋಪಚಾರಗಳಿಗೆ ಹಣ ಹೊಂದಿಸಲಾಗದೆ ಬಡವರು, ಮಧ್ಯಮ ವರ್ಗದ ಜನ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೆ ಜೀವನ ಪರ್ಯಂತ ಹೆಣಗಾಡಬೇಕಿತ್ತು. ಕೆಲವರು ಸಾಲದಿಂದಲೇ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸಪ್ತಪದಿ ಯೋಜನೆ ಜಾರಿಗೆ ತಂದು ಸರಳ ವಿವಾಹಕ್ಕೆ ಬೇಕಾದಷ್ಟು ವಸ್ತ್ರ, ತಾಳಿ, ಊಟದ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತಿದೆ. ಪ್ರತಿ ಜೋಡಿಗೆ 55 ಸಾವಿರ ಖರ್ಚು ಮಾಡುತ್ತಿದೆ. ಕೊರೊನಾ ಪ್ರಕರಣಗಳ ಏರಿಕೆ, ಜನಸಂದಣಿಗೆ ನಿರ್ಬಂಧ ಹೇರಿರುವುದರಿಂದ ಏಪ್ರಿಲ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

ಪ್ರತಿ ಜೋಡಿಗೆ 55 ಸಾವಿರ ವೆಚ್ಚ: ವರನಿಗೆ ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯಕ್ಕಾಗಿ 5 ಸಾವಿರ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10 ಸಾವಿರ, ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ, ಅಂದಾಜು 40 ಸಾವಿರ) ಒಟ್ಟು 55 ಸಾವಿರ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಅಲ್ಲದೇ ಮದುವೆ ಬಂಧುಗಳಿಗೆ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕೂಡ ಮಾಡುತ್ತಿದೆ. ಈ ಹಣವನ್ನು ದೇವಾಲಯ ನಿ ಧಿಯಿಂದ ಬಳಸಲಾಗುತ್ತಿದೆ.

ಜನರಿಂದ ಬೇಕಿದೆ ಪ್ರತಿಕ್ರಿಯೆ

Advertisement

ಸರ್ಕಾರ ಉತ್ತಮ ಸೌಲಭ್ಯ ಒದಗಿಸಿದರೂ ಈ ಮಹತ್ವಾಕಾಂಕ್ಷೆ ಯೋಜನೆಗೆ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿಲ್ಲ. ಸರಳ ವಿವಾಹಕ್ಕೆ ಮಾದರಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ (ಮಂತ್ರ ಮಾಂಗಲ್ಯ) ನಾಲ್ಕು ತಿಂಗಳಲ್ಲಿ ಒಂದೇ ಒಂದು ವಿವಾಹವೂ ನಡೆದಿಲ್ಲ. ಜಿಲ್ಲೆಯಲ್ಲಿ ಮೂರು ದೇವಸ್ಥಾನಗಳಲ್ಲಿ ಅವಕಾಶ ನೀಡಲಾಗಿದೆ. ಏಪ್ರಿಲ್‌ ತಿಂಗಳಲ್ಲಿ ಮೂರು ಅರ್ಜಿಗಳು ಬಂದಿವೆ. ವಿವಾಹ ನಡೆಯುವುದೋ ತಿಳಿದಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಪ್ರಖ್ಯಾತ ದೇವಸ್ಥಾನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಈವರೆಗೆ 1.07 ಕೋಟಿ ರೂ. ವೆಚ್ಚ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಒಟ್ಟು 195 ಜೋಡಿಗಳು ವಿವಾಹವಾಗಿದ್ದು ದೇವಸ್ಥಾನದ ನಿ ಧಿಯಿಂದ ಒಟ್ಟು 1.07 ಕೋಟಿ ರೂ. ಖರ್ಚಾಗಿದೆ. ರಾಜ್ಯದ ಕೆಲವು ಪ್ರಖ್ಯಾತ ದೇವಸ್ಥಾನಗಳಿಗೆ ಬೇಡಿಕೆಯಿದ್ದು, ಅಲ್ಲಿ ವಿವಾಹವಾಗುವರ ಸಂಖ್ಯೆ ಹೆಚ್ಚಿದೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ, ಮೈಸೂರಿನ ಚಾಮುಂಡಿ ಬೆಟ್ಟ, ಕೊಪ್ಪಳದ ಕನಕಾಚಲಪತಿ ದೇವಸ್ಥಾನ, ಹುಲಿಗೆಮ್ಮ ದೇವಸ್ಥಾನ, ಕುಣಿಗಲ್‌ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ, ಉಡುಪಿಯ ಕೊಲ್ಲೂರು ಮೂಕಾಂಬಿಕಾ, ಬ್ರಹ್ಮಾವರ ತಾಲೂಕಿನ ಮಂದಾರ್ತಿ ದುರ್ಗಾಪರಮೇಶ್ವರಿ, ಅಮೃತೇಶ್ವರ ದೇವಾಲಯಕ್ಕೆ ಹೆಚ್ಚಿನ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next