Advertisement

ಹೈ ವೋಲ್ಟೇಜ್‌ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

12:48 PM Apr 22, 2019 | Naveen |

ಶಿವಮೊಗ್ಗ: ರಣತಂತ್ರ, ಸಾಲು ಸಾಲು ಮುಖಂಡರ ಸರಣಿ ಸಭೆ, ಗುಪ್ತ ಸಭೆ, ಉಭಯ ಪಕ್ಷಗಳ ಮುಖಂಡರ ಸರಣಿ ಸಭೆಯೊಂದಿಗೆ ಶಿವಮೊಗ್ಗ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಕೊನೆಗೊಂಡಿತು.

Advertisement

ಮಂಡ್ಯದ ನಂತರ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಗಣನೆಗೊಂಡಿರುವ ಶಿವಮೊಗ್ಗದಲ್ಲಿ ನಾಲ್ಕೈದು ದಿನಗಳಿಂದ ಮುಖಂಡರ ದಂಡು ಹರಿದುಬಂದಿತ್ತು. ಶನಿವಾರ ಸಂಜೆ ಶಿವಮೊಗ್ಗಕ್ಕೆ ಬಂದ ಸಿಎಂ ಕುಮಾರಸ್ವಾಮಿ ಸಾಗರದಲ್ಲಿ ಬಹಿರಂಗ ಪ್ರಚಾರ ನಡೆಸಿ, ರಾತ್ರಿ ಮೂರು ಗಂಟೆವರೆಗೂ ಮುಖಂಡರ ಜತೆ ಸಭೆ ತಂತ್ರಗಾರಿಕೆ ಹೆಣೆದಿದ್ದಾರೆ. ಬೆಳಗ್ಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸಭೆ ನಡೆಸುವುದಾಗಿ ಅಂತಿಮ ಕ್ಷಣದಲ್ಲಿ ಕೈ ಬಿಟ್ಟಿದ್ದಾರೆ. ಸಿಎಂ ನಡೆ ಕುತೂಹಲ ಮೂಡಿಸಿದೆ. ಇತ್ತ ಮೂರು ದಿನದಿಂದ ಪುತ್ರನ ಪರ ಪ್ರಚಾರದಲ್ಲಿ ನಿರತರಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಭಾನುವಾರ ನಾನಾ ಸಮುದಾಯದ ಮುಖಂಡರ ಮನವೊಲಿಕೆಯಲ್ಲಿ ನಿರತರಾಗಿದ್ದರು. ಅವರು ಸಹ ಯಾವುದೇ ಬಹಿರಂಗ ಸಭೆಯಲ್ಲಿ ಕಾಣಿಸಕೊಳ್ಳದಿದ್ದು ವಿಶೇಷ. ಕಾರ್ಯಕರ್ತರನ್ನು ಅಂತಿಮ ಘಟ್ಟಕ್ಕೆ ಅಣಿಗೊಳಿಸುವ ಪ್ರಯತ್ನಕ್ಕೆ ಎರಡೂ ಪಕ್ಷಗಳು ಸಜ್ಜಾಗಿವೆ.

ಮುಖಂಡರ ದಂಡು
ಪ್ರಚಾರದ ವಿಷಯಲ್ಲಿ ಬಿಜೆಪಿ ಈಗಾಗಲೇ ಮುಂದಿದೆ. ಜೆಡಿಎಸ್‌ ಕಾರ್ಯಕರ್ತರಿಗೆ ಸಂಪನ್ಮೂಲ ಒದಗಿಸುವಲ್ಲಿ ವಿಫಲವಾಗಿವೆ. ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುವುದರಿಂದ ಸಂಪನ್ಮೂಲ ಕ್ರೊಢೀಕರಣಕ್ಕೆ ಮುಖಂಡರು ಪರದಾಡುತ್ತಿದ್ದಾರೆ. ಮೊದಲ ಹಂತದ ಚುನಾವಣೆ ಮುಗಿದ ಮೇಲೆ 15ಕ್ಕೂ ಹೆಚ್ಚು ಸಚಿವರು, ಶಾಸಕರು, ಸಂಸದರು ಶಿವಮೊಗ್ಗದಲ್ಲಿ ನೆಲೆಯೂರಿದ್ದು, ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಸೊರಬದಲ್ಲಿ ರೋಡ್‌ ಶೋ ನಡೆಸಿದ್ದು ಬಿಟ್ಟರೆ ಉಳಿದಂತೆ ಸಮುದಾಯದ ಮುಖಂಡರನ್ನು ಮನೆ ಮನೆ ಭೇಟಿ ಮತಯಾಚಿಸಿದ್ದಾರೆ. ಬಿಜೆಪಿ ಸಹ ತಾನು ಕಡಿಮೆ ಇಲ್ಲವೆಂಬಂತೆ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ನಡೆಸಿತು. ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಸಂತೋಷ್‌ ಜೀ ಜತೆ ಜೆಡಿಎಸ್‌ಗೆ ಟಾಂಗ್‌ ಕೊಡಬಲ್ಲ ನಾಯಕರನ್ನು ಕರೆಸಿ ಪ್ರಚಾರ ನಡೆಸಿತ್ತು.

ಬಿಜೆಪಿ ಮುಖಂಡರು ಶಿವಮೊಗ್ಗ ನಗರದಲ್ಲಿ ಅದ್ಧೂರಿ ರೋಡ್‌ ಶೋ ನಡೆಸಿ ಮತಯಾಚಿಸಿದರು. ಪ್ರತಿ ಚುನಾವಣೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಕೈ ಹಿಡಿಯುತ್ತಿದ್ದು ಹೆಚ್ಚಿನ ಆದ್ಯತೆ ನೀಡಿದೆ. ಪೇಜ್‌ ಪ್ರಮುಖರು ಎರಡೆರರು ಬಾರಿ ಮನೆಮನೆ ತಲುಪಿದ್ದಾರೆ.

ಸ್ನೇಹಮಿಲನ: ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಚರ್ಚೆಯಾಗಿದ್ದು ಸ್ನೇಹಮಿಲನ ಕಾರ್ಯಕ್ರಮಗಳು. ಎರಡೂ ಪಕ್ಷಗಳು ಪ್ರತಿ ಸಮುದಾಯದ ಮುಖಂಡರನ್ನು ಕರೆಸಿಕೊಂಡು ಬೆಂಬಲ ಯಾಚಿಸಿದರು. ದೊಡ್ಡ ಸಮುದಾಯಗಳನ್ನು ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣ ಸಮುದಾಯಗಳನ್ನು ಮನೆಗೆ ಕರೆಸಿಕೊಂಡು ಬೆಂಬಲ ಯಾಚಿಸಿದವು. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಈ ಪ್ರಯೋಗದ ಮೂಲಕ ಯಶಸ್ಸು ಕಂಡಿತ್ತು. ಈ ಬಾರಿಯೂ ಅದನ್ನೇ ಮುಂದುವರಿಸಿತ್ತು. ಅವರಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ಜೆಡಿಎಸ್‌- ಕಾಂಗ್ರೆಸ್‌ ಸಭೆ ಆಯೋಜಿಸಿತ್ತು. ಸ್ನೇಹಮಿಲನ ಕಾರ್ಯಕ್ರಮದಲ್ಲೂ ಬಿಜೆಪಿ ಮುಂದಿತ್ತು.

Advertisement

ಜಿಲ್ಲೆಯಿಂದ ಹೊರಟ ಮುಖಂಡರು: ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ 30ಕ್ಕೂ ಹೆಚ್ಚು ಮುಖಂಡರು ಶಿವಮೊಗ್ಗಕ್ಕೆ ಬಂದಿದ್ದದರು ಇವರೆಲ್ಲ ಭಾನುವಾರ ಸಂಜೆ ಆರು ಗಂಟೆಗೆ ತಮ್ಮ ಊರಿನ ಕಡೆ ಪ್ರಯಾಣ ಬೆಳೆಸಿದರು. ಬಿಜೆಪಿಗೆ ಏಳು ಮಂದಿ ಶಾಸಕರಿದ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ.

ಕೊನೆ ಆಟ
ಮನೆ ಮನೆ ಪ್ರಚಾರಕ್ಕೆ ಸೋಮವಾರ ಒಂದು ದಿನ ಬಾಕಿ ಇದ್ದು, ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸಿವೆ. ಕಾಂಚಾಣದ ಸದ್ದು ಕೇಳುತ್ತಿರುವ ಬಗ್ಗೆ ಹಲವೆಡೆ ವರದಿಯಾಗಿದೆ. ಹಣ ಹಂಚಿಕೆ ಕುರಿತಂತೆ ಕಾರ್ಯಕರ್ತರ ನಡುವೆ ಅಸಮಾಧಾನಕ್ಕೂ ಕಾರಣವಾಗಿದೆ.

ಅಭ್ಯರ್ಥಿಗಳಿಗೆ ಆತಂಕ
ಇಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದ ಅಭ್ಯರ್ಥಿಗಳು ಈಗ ಕುಳಿತಲ್ಲೇ ಲೆಕ್ಕ ಹಾಕುತ್ತಿದ್ದಾರೆ. ಯಾವ ತಾಲೂಕಿನಲ್ಲಿ ಎಷ್ಟು ಮತ ಬೀಳಬಹುದು, ಇನ್ನೂ ಎಲ್ಲೆಲ್ಲಿ ಪ್ರಚಾರ ಮಾಡಬೇಕಿತ್ತು ಎಂಬ ಬಗ್ಗೆ ಲೆಕ್ಕ ಹಾಕುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next