Advertisement

ಕೃಷಿ ಜೀವನ ಬದಲಿಸುವುದೇ ಧ್ಯೇಯ

01:07 PM Jan 26, 2020 | Naveen |

ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರಾಜ್ಯವ್ಯಾಪಿ ಕಾರ್ಯ ನಿರ್ವಹಿಸುತ್ತಿದೆ. ಸಾಲ ಕೊಡುವುದೇ ಇದರ ಉದ್ದೇಶವಲ್ಲ. ಇದೊಂದು ಕಿರುಸಾಲ ಕೊಡುವ ಸಂಸ್ಥೆ. ಆದರೆ ನಮ್ಮ ಉದ್ದೇಶ ಕೃಷಿ ಜೀವನ, ವ್ಯಕ್ತಿತ್ವ, ಆಹಾರ ಬದುಕಿನ ಘಟ್ಟಗಳನ್ನು ಪರಿವರ್ತನೆಗೆ ತರುವುದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಶನಿವಾರ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ಕೇಂದ್ರ ಕಟ್ಟಡ ಚೈತನ್ಯಸೌಧ ಹಾಗೂ ಯಂತ್ರಶ್ರೀ ಭತ್ತ ಅಭಿಯಾನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆ ಕೇವಲ ಹೆರುವಾಗ, ಊಟ ಹಾಕುವಾಗ ಗೃಹಲಕ್ಷ್ಮೀಯಾಗುವುದಿಲ್ಲ. ಅವಳು ಪತಿಗೆ, ತಂದೆಗೆ, ಮಕ್ಕಳಿಗೆ ಬೆಂಬಲವಾಗಿ ನಿಂತು ಅವರನ್ನು ಬೆಳೆಸುವ ನಿಟ್ಟನಲ್ಲಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿನ ತಮ್ಮ ಒಡನಾಟದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅನಿಲ್‌ ಜೈನ್‌ ವಿನ್ಯಾಸದಲ್ಲಿ ಗುತ್ತಿಗೆದಾರ ಶ್ರೀನಿವಾಸ್‌ ನಿರ್ಮಿಸಿರುವ ಈ ಕಟ್ಟಡಕ್ಕೆ ಹೇಮಾವತಿ ವಿ. ಹೆಗ್ಗಡೆ ಅವರ ಸಲಹೆಯಂತೆ ಚೈತನ್ಯಸೌಧ ಎಂಬ ಹೆಸರನ್ನಿಡಲಾಗಿದ್ದು, ಈ ಕಚೇರಿಯು ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ಲಕ್ಷಾಂತರ ಮಹಿಳೆಯರಿಗೆ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಮಹಿಳೆಯರ ಅಭ್ಯುದಯಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವರಪ್ರಸಾದವಾಗಿದೆ. ಜಿಲ್ಲೆಯ ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದು ಸಬಲರಾಗಲು ಕೋರಿದರು.

ಸಂಸದ ಬಿ.ವೈ.ರಾಘವೇಂದ್ರ ಅವರು ಸಿಡ್ಬಿ ಪ್ರಯಾಸ್‌ ಸ್ವ-ಉದ್ಯೋಗ ಯೋಜನೆ ನೆರವು ಬಿಡುಗಡೆ ನೆರವೇರಿಸಿ ಮಾತನಾಡಿ, ಜಿಲ್ಲೆಯ ಮಹಿಳೆಯರ ಆರ್ಥಿಕ ಸಾಧನಗೆ ಪೂರಕವಾದ ಈ ಯೋಜನೆ ಹಾಗೂ ಧರ್ಮಾಧಿಕಾರಿಗಳನ್ನು ಅಭಿನಂದಿಸಿದರು. ವಿಕಲ ಚೇತನರಿಗೆ ಸಲಕರಣೆ ವಿತರಿಸಿದ ಮಹಾನಗರ ಪಾಲಿಕೆ ಮೇಯರ್‌ ಲತಾ ಗಣೇಶ್‌ ಮಾತನಾಡಿ, ನಾನು ಈ ಸ್ಥಾನಕ್ಕೆ ಬರಲು ನನಗೆ ಹಿಂದಿನ 10 ವರ್ಷಗಳ ಕಾಲ ಧರ್ಮಸ್ಥಳದ ಈ ಯೋಜನೆ ಮೂಲ ಪ್ರೇರಕ ಶಕ್ತಿಯಾಗಿತ್ತು ಎಂದು ಧರ್ಮಾಧಿಕಾರಿಗಳನ್ನು ಅಭಿನಂದಿಸಿದರು.

Advertisement

ಭತ್ತ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್‌ ಮಾತನಾಡಿ, ನಾನೊಬ್ಬ ರೈತ ಕುಟುಂಬದ ಮಹಿಳೆಯಾಗಿದ್ದು, ಭತ್ತದ ಬೇಸಾಯದ ಬಗ್ಗೆ ಅರಿವಿದೆ. ನನಗೆ ಇದರ ಉದ್ಘಾಟನೆಯ ಸೌಭಾಗ್ಯ ನೀಡಿದ್ದು, ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಉಪಮೇಯರ್‌ ಚನ್ನಬಸಪ್ಪ, ಸದಸ್ಯರಾದ ಸುರೇಖಾ ಮುರುಳೀಧರ್‌, ಸುನೀತಾ ಅಣ್ಣಪ್ಪ, ಯಮುನಾ ರಂಗೇಗೌಡ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ನಳೀನ್‌ ರಾವ್‌ ತಂಡದವರು ಪ್ರಾರ್ಥಿಸಿದರು. ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿದರು. ಯೋಜನಾಧಿಕಾಕಾರಿ ಬಾಲಕೃಷ್ಣ ಹಿರಿಂಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next