ಅರಸೀಕೆರೆ: ಜೆಡಿಎಸ್ ವರಿಷ್ಠರ ವಿರುದ್ಧ ಸಿಡಿದೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ರವಿವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದ ಸಮಾವೇಶದಲ್ಲಿ ನೂರಾರು ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಕ್ಷೇತ್ರದ ರಾಜಕೀಯ ಗೊಂದಲಕ್ಕೆ ತೆರೆ ಎಳೆದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
ಜೆಡಿಎಸ್‌ನಲ್ಲಿ ಉಳಿಗಾಲವಿಲ್ಲ
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‌ನಲ್ಲಿ ಆ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ಇರಬೇಕೇ ಹೊರತು, ಅದನ್ನು ಪ್ರಶ್ನೆ ಮಾಡಿದರಿಗೆ ಪಕ್ಷದಲ್ಲಿ ಉಳಿಗಾಲ ಇಲ್ಲ ಎನ್ನುವುದಕ್ಕೆ ನಾನು ಮತ್ತು ಶಿವಲಿಂಗೇಗೌಡ ಸೇರಿದಂತೆ ರಾಜ್ಯದಲ್ಲಿ ಅನೇಕರು ಸಾಕ್ಷಿಯಾಗಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ ಸತತ ಮೂರು ಬಾರಿ ಆಯ್ಕೆಯಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದರೆ ಆ ಪಕ್ಷದ ವರಿಷ್ಠರು ಅದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸದನದಲ್ಲಿ ಹೊಗಳಿದ್ದಕ್ಕಾಗಿ ಹಾಗೂ ಎಂಎಲ್‌ಸಿ ಸ್ಥಾನವನ್ನು ಕುಟುಂಬದ ಸದಸ್ಯರಿಗೆ ನೀಡದೆ ಹಿಂದುಳಿದ ವರ್ಗದ ಬಿಳಿಚೌಡಯ್ಯ ಅವರಿಗೆ ನೀಡಬೇಕೆಂಬ ತಮ್ಮ ಬೇಡಿಕೆಯಿಂದ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಆ ಪಕ್ಷ ತೊರೆದು, ಕಾಂಗ್ರೆಸ್ ಸೇರಬೇಕಾಯಿತು ಎಂದರು.