ಹಿರೇಕೆರೂರ: ತರಳಬಾಳು ಜಗದ್ಗುರು ಲಿಂ| ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 106ನೇ ಜಯಂತಿ ಮತ್ತು ಸಿಇಎಸ್ ವಿದ್ಯಾಸಂಸ್ಥೆಯ 68ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಏ. 28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆಯ ಕೇಂದ್ರ ಸಮಿತಿ ಸದಸ್ಯ ಎಸ್.ಎಸ್. ಪಾಟೀಲ ಹೇಳಿದರು.
ಸಿರಿಗೆರೆಯ ಲಿಂ| ಶಿವಕುಮಾರ ಸ್ವಾಮೀಜಿಯವರು ಈ ನಾಡು ಮೆಚ್ಚಿದ ನೇರ ನುಡಿಯ ಸ್ಪಷ್ಟ ಮಾತುಗಳ ದಿಟ್ಟ ಹೆಜ್ಜೆಯ ಗುರುಗಳು. ಹಳ್ಳಿಗಾಡುಗಳಲ್ಲಿ ನೆಲೆ ಕಳೆದುಕೊಂಡ ಬೇರುಗಳಿಗೆ ಶಿಕ್ಷಣದ ನೀರೆರೆದು ಬದುಕಿಸಿ, ಸುಡುವ ಬೆಂಗಾಡಿನಲ್ಲಿಯೂ ಸುಖದ ನಂದನವನವನ್ನು ನಿರ್ಮಿಸಿದವರು ಶ್ರೀಗಳು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ಶಿಕ್ಷಣ ಸಂಸ್ಥೆ, ಹಾಸ್ಟೆಲ್ಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ್ದಾರೆ ಎಂದರು. ಸದ್ಭಕ್ತರ ಹೃದಯ ಸಿಂಹಾಸನಾಧೀಶರಾದ ಅವರನ್ನು ನೆನೆಯುವುದೇ ಪುಣ್ಯದ ಕೆಲಸ. ಅವರ 106 ನೇ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಲು ಭಕ್ತರಿಗೆ ಇದೊಂದು ಸದವಕಾಶ ಎಂದರು.
ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ ಮಾತನಾಡಿ, ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಸ್ಥೆಯು 13 ವಿದ್ಯಾರ್ಥಿಗಳಿಂದ ಸ್ಥಾಪನೆಯಾಗಿ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಸಿಇಎಸ್ ವಿದ್ಯಾಸಂಸ್ಥೆಯು ಸೌಹಾರ್ದ ಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆಗೊಂಡು 125 ಕೊಠಡಿಗಳ ಬೃಹತ್ ಕಟ್ಟಡಗಳು 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಈ ಭಾಗದ ಮಕ್ಕಳಿಗೆ ಶಿಕ್ಷಣದ ತವರಾಗಿ ತಲೆಯೆತ್ತಿ ನಿಂತಿದೆ. ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು, ಯೋಗ ಮಹಾವಿದ್ಯಾಲಯಗಳನ್ನು ಹೊಂದಿರುವ ಈ ಸಂಸ್ಥೆಯು ಗ್ರಾಮೀಣ ಭಾಗದ ಮಕ್ಕಳ ಎಲ್ಲ ಆಶಯಗಳನ್ನು ನೆರವೇರಿಸುವ ವೈವಿಧ್ಯಮಯ ಶೈಕ್ಷಣಿಕ ಕೋರ್ಸಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿದೆ. ಇಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯ 68ನೇ ಸಂಸ್ಥಾಪನಾ ದಿನಾಚರಣೆ ಇದೇ ಏ. 28 ರಂದು ನೆರವೇರಲಿದೆ. ತಾಲೂಕಿನ ಎಲ್ಲ ಶಿಕ್ಷಣ ಪ್ರೇಮಿಗಳು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದರು. ಚಂದ್ರಶೇಖರಪ್ಪ ಇದ್ದರು.
Advertisement
ಪಟ್ಟಣದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಲ್ಲಿನ ಸಿಇಎಸ್ ಸಂಸ್ಥೆ ಆವರಣದಲ್ಲಿನ ಡಾ| ಎಪಿಜೆ ಅಬ್ದುಲ್ ಕಲಾಂ ಸಭಾ ಭವನದಲ್ಲಿ ಸಾಧು ವೀರಶೈವ ಸಮಾಜ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕು ಹಾಗೂ ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಆಶ್ರಯದಲ್ಲಿ ಏ. 28 ರಂದು ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.