ಮೈಸೂರು: ಶ್ರೀ ಜಗಜ್ಯೋತಿ ಬಸವೇಶ್ವರ ಅಕ್ಕ ಮಹಾದೇವಿ ಸೇವಾ ಪ್ರತಿಷ್ಠಾನ ಹೊರತಂದಿರುವ ಡಾ.ಶಿವಕುಮಾರಸ್ವಾಮೀಜಿ ಅವರ ನೆಚ್ಚಿನ ವಚನಗಳ ಸೀಡಿ ಲೋಕಾರ್ಪಣೆ ಮಾಡಲಾಯಿತು. ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪೊ›.ಕೃಷ್ಣೇಗೌಡ ಸೀಡಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಇಂದಿನ ಯುವಜನರು ಮೊಬೈಲ್ ಮೂಲಕ ನೋಡುವ ಜಗತ್ತಿಗಿಂತ ಅದ್ಭುತವಾದ ಜಗತ್ತನ್ನು ವಚನಕಾರರು ಪ್ರಾಚೀನ ಕಾಲದಲ್ಲೇ ತೋರಿಸಿ ಹೋಗಿದ್ದಾರೆ ಎಂದರು. ವಚನಗಳು ಅಂತರಾತ್ಮದ ದರ್ಶನ ಮಾಡಿಸುತ್ತವೆ, ಆದರೆ ಇಂಟರ್‌ನೆಟ್‌ನಿಂದ ಈ ಕೆಲಸ ಸಾಧ್ಯವಿಲ್ಲ.
ಕನ್ನಡಕ್ಕೆ ಇರುವ ಕಾಂತಿ, ತಾಕತ್ತನ್ನು ಪ್ರಾಚೀನ ಕವಿಗಳು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ನನ್ನ ಬದುಕು, ಬರಹ ಎಲ್ಲವೂ ಕನ್ನಡವಾಗಿವೆ ಎಂದು ಹೇಳಿದರು. ಮಾತಿನ ಮೂಲಕವೇ ಕನ್ನಡ ಜನರ ಹೃದಯ ಮುಟ್ಟಿದವರು ವಚನಕಾರರು. ನಮ್ಮ ಮಾತು ಪ್ರಾಮಾಣಿಕವಾಗಿದ್ದಾಗ ತಾನೇ ಪ್ರಕಾಶಗೊಳ್ಳುವ ಶಕ್ತಿ ಇರುತ್ತದೆ. ಹೀಗಾಗಿ ಮಾತಿಗೆ ಸ್ವಯಂಪ್ರಭೆ ಶಕ್ತಿ ಇರಬೇಕು ಎಂದರು.
ವಚನಗಳ ಮೂಲಕ ಇಡೀ ಜಗತ್ತಿನ ಜತೆಗೆ ಸಂವಹನ ಸಾಧ್ಯ ಎಂಬುದನ್ನು ಕನ್ನಡದ ವಚನಕಾರರು ತೋರಿಸಿಕೊಟ್ಟಿದ್ದಾರೆ. ಮಾತುಗಳೇ ವಚನಗಳಾಗಿ ಕಾವ್ಯವಾಗುವುದು ದೊಡ್ಡ ಪವಾಡ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಜಿಲ್ಲೆ ಪಾಂಡುಮಟ್ಟಿ ವಿರಕ್ತ ಮಠದ ಗುರು ಬಸವಸ್ವಾಮೀಜಿ, ಇಂಟರ್‌ನೆಟ್, ಮೊಬೈಲ್‌ಗಳಿಗಿಂತ ಮೊದಲು ಆತ್ಮ ಪರಿಶೋಧನೆ ಮಾಡಿಸಿದ್ದು ವಚನಕಾರರು.
ಹೀಗಾಗಿ ವಚನ ಸಾಹಿತ್ಯದಲ್ಲಿ ರೋಮಾಂಚನವಿದೆ ಎಂದರು. ಮನುಷ್ಯನಿಗೆ ಕಲೆ, ಸಂಗೀತ, ಸಾಹಿತ್ಯದ ಅಭಿರುಚಿ ಇರಬೇಕು. ಇವುಗಳ ಬಗ್ಗೆ ಅಭಿರುಚಿ ಇಲ್ಲದವನು ಪಶುವಿಗೆ ಸಮಾನ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಲನಚಿತ್ರ ಕಲಾವಿದ ವಿಜಯ ಕಸ್ತೂರಿ ರಚಿಸಿರುವ ಕನ್ನಡ ಬಾವುಟ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅನ್ನದಾನೇಶ್ವರ ಸ್ವಾಮೀಜಿ, ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಎಂ.ಅಕ್ಕ ಮಹಾದೇವಿ, ಡಾ.ಸತ್ಯನಾರಾಯಣ, ಡಾ.ಶ್ಯಾಮ್, ಡೇವಿಡ್, ಡಾ.ಕಾರ್ತಿಕ್ ಮತ್ತಿತರರಿದ್ದರು. ಇದೇ ವೇಳೆ ಸಂಗೀತ ನಿರ್ದೇಶಕ ಪ್ರವೀಣ್ ವಿ.ರಾವ್‌ರನ್ನು ಸನ್ಮಾನಿಸಲಾಯಿತು.