ಬೆಂಗಳೂರು: ಈವರೆಗೆ 13 ಚುನಾವಣೆಗಳನ್ನು ಕಂಡಿರುವ ಶಿವಾಜಿನಗರ ವಿಧಾನಸಭೆ ಕ್ಷೇತ್ರ ಇದೀಗ 14ನೇ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಹೊರತುಪಡಿಸಿದರೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಯಾರೆಂದು ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್ ಭದ್ರಕೋಟೆ ಎಂದು ಕಂಡು ಬಂದರೂ, ಬಿಜೆಪಿಗೆ ಭೇದಿಸಲು ಅಸಾಧ್ಯವೇನಲ್ಲ.
ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರೇ ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಎಂದಿನಂತೆ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಮಾಜಿ ಕಾರ್ಪೋರೇಟರ್ ಚಂದ್ರ ಅವರ ಹೆಸರೂ ಕೇಳಿ ಬರುತ್ತಿದೆ. 2019ರ ಉಪಚುನಾವಣೆಯಲ್ಲಿ ಸೋತಿದ್ದ ಸರವಣ ಅವರೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ ಇನ್ನೂ “ಅಭ್ಯರ್ಥಿ ಹುಡುಕಾಟದಲ್ಲಿದೆ’.
ಸುದೀರ್ಘ 25 ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅಲ್ಪಸಂಖ್ಯಾತರ ಪ್ರಭಾವಿ ನಾಯಕ ಆರ್. ರೋಷನ್ ಬೇಗ್ ಅವರ ಪುತ್ರ ರುಮಾನ್ ಬೇಗ್ ಜೆಡಿಎಸ್‌ನಿಂದ ಸ್ಪರ್ಧೆ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಜತೆಗೆ ರೋಷನ್ ಬೇಗ್ ಈ ಸಂಬಂಧ ಚರ್ಚೆ ಕೂಡ ನಡೆಸಿದ್ದಾರೆ. ಈ ಮಧ್ಯೆ, ರೋಷನ್ ಬೇಗ್ ತಮ್ಮ ಮಗನಿಗೆ ಹೆಬ್ಟಾಳದಿಂದ ಟಿಕೆಟ್ ಕೊಡಿಸುವ ಪ್ರಯತ್ನವೂ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಬಿಜೆಪಿಯಿಂದಲೂ ತನ್ನ ಮಗನಿಗೆ ಟಿಕೆಟ್ ಕೊಡಿಸಲು ಬೇಗ್ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳಿವೆ. 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ರೋಷನ್ ಬೇಗ್ ಪ್ರಯತ್ನಿಸಿದ್ದರು. ಆದರೆ, ಅದು ಫಲ ಕೊಟ್ಟಿರಲಿಲ್ಲ. 2019ರ ಉಪ ಚುನಾವಣ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಈ ಬಾರಿಯ ಚುನಾವಣೆ ರೋಷನ್ ಬೇಗ್ ಅವರ ರಾಜಕೀಯ ಭವಿಷ್ಯ ನಿರ್ಣಯಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಸ್ಲಿಂ ಮತಗಳನ್ನು ನೆಚ್ಚಿಕೊಂಡು ಹೈದರಾಬಾದ್ ಸಂಸದ ಓವೈಸಿ ಅವರ ಎಂಐಎಂ ಹಾಗೂ ಎಸ್‌ಡಿಪಿಐ ಪಕ್ಷ ಇಲ್ಲಿ ಚುನಾವಣೆ ಬಂದಾಗ ಸಕ್ರಿಯವಾಗುತ್ತವೆ. ಈ ಬಾರಿಯೂ ಎಂಐಎಂ, ಎಸ್‌ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆದರೆ, ಅಭ್ಯರ್ಥಿ ತೀರ್ಮಾನವಾಗಿಲ್ಲ. ಅದೇ ರೀತಿ 2018ರಲ್ಲಿ ಅಯ್ಯೂಬ್ ಖಾನ್ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು. ಈ ಬಾರಿ ಇನ್ನೂ ನಿರ್ಧಾರವಾಗಿಲ್ಲ. ಆದರೆ, ಆಮ್ ಆಮ್ ಆದ್ಮಿ ಪಕ್ಷ ಇಲ್ಲಿ ಈ ಬಾರಿಯೂ ಅಭ್ಯರ್ಥಿ ಹಾಕಲಿದೆ.
ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ: ಶಿವಾಜಿನಗರ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸರಾಸರಿ 15 ರಿಂದ 20 ಸಾವಿರ ಮತಗಳ ಅಂತರವಿದೆ. ಬಿಜೆಪಿಯಿಂದ ಎರಡು ಬಾರಿ ಕಟ್ಟಾ ಸುಬ್ರಮಣ್ಯ ನಾಯ್ಡು ಗೆದ್ದಿದ್ದರೆ, ಎರಡು ಬಾರಿ ನಿರ್ಮಲಕುಮಾರ್ ಸುರಾನಾ ಸೋತಿದ್ದಾರೆ. ಇಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. 2008ರಿಂದ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಠೇವಣಿ ಸಹ ಸಿಕ್ಕಿಲ್ಲ. 2013ರಲ್ಲಿ ಜೆಡಿಎಸ್ ಅಭ್ಯರ್ಥಿ 5,983 ಗರಿಷ್ಠ ಮತಗಳನ್ನು ಪಡೆದಿದ್ದರು. 2018ರಲ್ಲಿ “ನೋಟಾ’ಗಿಂತ ಕಡಿಮೆ ಮತಗಳನ್ನು ಜೆಡಿಎಸ್ ಪಡೆದುಕೊಂಡಿತ್ತು. ರೋಷನ್ ಬೇಗ್ 1994 ಮತ್ತು 99ರಲ್ಲಿ ಜನತಾ ಪಾರ್ಟಿ ಮತ್ತು ಜನತಾ ದಳದಿಂದ ಗೆದ್ದಿದ್ದರು. ಅದಾದ ನಂತರ ಇಲ್ಲಿ ಜೆಡಿಎಸ್‌ಗೆ ನೆಲೆ ಸಿಕ್ಕಿಲ್ಲ. ಕೊನೆ ಕ್ಷಣದವರೆಗೆ ಕಾದು ಕಾಂಗ್ರೆಸ್-ಬಿಜೆಪಿಯ ಭಿನ್ನಮತಿಯರನ್ನು ಕಣಕ್ಕಿಳಿಸುವುದು ಇಲ್ಲಿ ಜೆಡಿಎಸ್ ವಾಡಿಕೆಯಾಗಿದೆ. ಈ ಬಾರಿಯೂ ವಾಡಿಕೆಯಂತೆ ನಡೆದುಕೊಳ್ಳುವ ಸಾಧ್ಯತೆಗಳಿವೆ.
ಸರ್ವಧರ್ಮ ಸಂಗಮ: 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ತಮ್ಮ ಬಾಲ್ಯದ ದಿನಗಳನ್ನು ಇಲ್ಲಿ ಕಳೆದಿದ್ದಕ್ಕೆ ಇದಕ್ಕೆ ಶಿವಾಜಿನಗರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಮೇಲ್ನೋಟಕ್ಕೆ ಇದು ಮುಸ್ಲಿಂ ಬಾಹುಳ್ಯ ಕ್ಷೇತ್ರವೆಂದು ಎನಿಸಿ ಕೊಂಡರೂ ಇದು ಸರ್ವಧರ್ಮ ಸಂಗಮವಾಗಿದೆ.
ಎಲ್ಲ ಪಕ್ಷಗಳಿಗೂ ಮಣೆ
ಕಳೆದ ಎರಡೂವರೇ ದಶಕಗಳಿಂದ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಪೈಪೋಟಿ ಇದ್ದರೂ, 1967 ರಿಂದ ಇಲ್ಲಿವರೆಗೆ ಈ ಕ್ಷೇತ್ರ ಬಿಜೆಪಿ-ಕಾಂಗ್ರೆಸ್ ಹಾಗೂ ಜನತಾ ಪರಿವಾರ ಎಲ್ಲಾ ಪಕ್ಷಗಳಿಗೂ ಮಣೆ ಹಾಕಿದೆ. ಅದೇ ರೀತಿ ಈವರೆಗೆ ನಡೆದಿರುವ 13 ಚುನಾವಣೆಗಳಲ್ಲಿ 9 ಬಾರಿ ಮುಸ್ಲಿಂ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಘಟಾನುಘಟಿಗಳಾದ ಎಂ. ರಘುಪತಿ, ಎ.ಕೆ. ಅನಂತಕೃಷ್ಣ, ಸಿ.ಎಂ. ಇಬ್ರಾಹೀಂ, ಆರ್. ರೋಷನ್ ಬೇಗ್, ಕಟ್ಟಾ ಸುಬ್ರಮಣ್ಯ ನಾಯ್ಡು ಈ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದಾರೆ. ಏಳು ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 3 ಬಾರಿ ಜನತಾ ಪಕ್ಷ, ಎರಡು ಬಾರಿ ಬಿಜೆಪಿ, 1 ಬಾರಿ ಜನತಾ ದಳ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದಾರೆ.
-ರಫೀಕ್ ಅಹ್ಮದ್