Advertisement

ಶತಮಾನದ ರುಚಿ: ಶಿವಾಜಿ ಮಿಲ್ಟ್ರಿ ಹೋಟೆಲ್‌

10:39 PM Jul 19, 2019 | mahesh |

ಓಲ್ಡ್‌ ಈಸ್‌ ಗೋಲ್ಡ್‌ ಅನ್ನೋದು, ಶಿವಾಜಿ ಮಿಲ್ಟ್ರಿ ಹೋಟೆಲ್‌ನ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಶತಮಾನಗಳಷ್ಟು ಹಳೆಯದಾದ ಈ ಹೋಟೆಲ್‌ನ ತಾಜಾ ತಾಜಾ ಖಾದ್ಯಕ್ಕೆ ಮನಸೋಲದವರೇ ಇಲ್ಲ…

Advertisement

ನೀವು ಮಾಂಸಾಹಾರಿಗಳಾ? ಬಿರಿಯಾನಿ ಅಂದ್ರೆ ಬಾಯಲ್ಲಿ ನೀರೂರುತ್ತಾ? ಹಾಗಾದ್ರೆ, ಜಯನಗರದ ಶಿವಾಜಿ ಮಿಲ್ಟ್ರಿ ಹೋಟೆಲ್‌ಗೊಮ್ಮೆ ಹೋಗಿ ಬನ್ನಿ. ಈ ಹೋಟೆಲ್‌ನ ಅಡುಗೆ ಎಷ್ಟು ಸ್ವಾದಿಷ್ಟಕರವೋ, ಇತಿಹಾಸವೂ ಅಷ್ಟೇ ಸ್ವಾರಸ್ಯಕರ.

ಇದು ನಿನ್ನೆ, ಮೊನ್ನೆ ಶುರುವಾದ ಹೋಟೆಲ್‌ ಅಲ್ಲ, ಬ್ರಿಟಿಷರ ಕಾಲದ ಹೋಟೆಲ್‌ ಇದು. 1908ರಲ್ಲಿ ಎಸ್‌. ಮುನ್ನಾಜಿ ರಾವ್‌ ಎಂಬುವರು ಪ್ರಾರಂಭಿಸಿದ ಮಿಲ್ಟ್ರಿ ಹೋಟೆಲ್‌ ಅನ್ನು, ಮುಂದೆ ಅವರ ಮಗ ಎಂ. ಲಕ್ಷ್ಮಣ್‌ ರಾವ್‌ ಮುನ್ನಡೆಸಿದರು. ಮೊದಲು ನಗರ್ತ ಪೇಟೆಯಲ್ಲಿದ್ದ ಹೋಟೆಲ್‌ ಅನ್ನು, 30 ವರ್ಷಗಳ ಹಿಂದೆ ಲಕ್ಷ್ಮಣ್‌ ರಾವ್‌ರ ಮಕ್ಕಳಾದ ರಾಜೀವ್‌ ಮತ್ತು ಲೋಕೇಶ್‌ ಸಹೋದದರು ಜಯನಗರಕ್ಕೆ ಸ್ಥಳಾಂತರಿಸಿದರು. ಮೂಲತಃ ಮರಾಠರಾದ ಇವರು, ತಮ್ಮ ಹೋಟೆಲ್‌ಗೆ ಮರಾಠ ದೊರೆ ಛತ್ರಪತಿ ಶಿವಾಜಿಯ ಹೆಸರನ್ನಿಟ್ಟಿದ್ದಾರೆ.

ಹೋಟೆಲ್‌ನಲ್ಲಿ ಮ್ಯಾನೇಜರ್‌ ಸೀಟಿನ ಪಕ್ಕದಲ್ಲಿ, ಬ್ರಿಟಿಷರಿಗೆ ಟ್ಯಾಕ್ಸ್‌ ಕಟ್ಟಿದ ರಶೀದಿ ಇಟ್ಟಿರುವುದನ್ನು ಕಾಣಬಹುದು. ಬ್ರಿಟಿಷರ ಕಾಲದಿಂದಲೂ, ಈ ಹೋಟೆಲ್‌ ಮರಾಠ ಶೈಲಿಯ ಅಡುಗೆಗೆ ಪ್ರಸಿದ್ಧಿ ಪಡೆದಿದೆ. ಸೋಮವಾರವನ್ನು ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 8.30- 3.30ರ ತನಕ ಹೋಟೆಲ್‌ ತೆರೆದಿರುತ್ತದೆ. ಇಲ್ಲಿ, ಒಂದೇ ಸಲಕ್ಕೆ 70-80 ಮಂದಿ ಕುಳಿತು ಊಟ ಮಾಡಬಹುದು.

ಬಿರಿಯಾನಿಯೇ ಸ್ಪೆಷಲ್‌
ಈ ಹೋಟೆಲ್‌ನ ವಿಶೇಷತೆಯೇ, ದೊನ್ನೆ ಬಿರಿಯಾನಿ, ಮಟನ್‌ ಬಿರಿಯಾನಿ ಮತ್ತು ಕೀಮಾ. ಹೋಟೆಲ್‌ ಆರಂಭವಾದ ದಿನದಿಂದಲೂ ಜನ ಇಲ್ಲಿನ ಬಿರಿಯಾನಿಗೆ ಮನಸೋತಿದ್ದಾರೆ. ಇಲ್ಲಿನ ಸ್ವಾದಿಷ್ಟ ದೊನ್ನೆ ಬಿರಿಯಾನಿಗೆ ಪ್ರಶಸ್ತಿಯೂ ಸಿಕ್ಕಿದೆ. ಇನ್ನು ಮಟನ್‌ ಬಿರಿಯಾನಿ, ಕೀಮಾ ಕಥೆ ಕೇಳಲೇಬೇಡಿ. ಹೋಟೆಲ್‌ಗೆ ಬರುವ ಸೆಲೆಬ್ರಿಟಿಗಳೂ ಇವುಗಳ ರುಚಿ ನೋಡದೇ ಹೋಗುವುದಿಲ್ಲ. ಹೋಟೆಲ್‌ಗೆ ಬರಲಾಗದಿದ್ದರೆ, ಇಲ್ಲಿನ ಊಟವನ್ನು, ವಿಶೇಷವಾಗಿ ಕೀಮಾವನ್ನು ಆರ್ಡರ್‌ ಮಾಡಿ, ತರಿಸಿಕೊಳ್ಳುತ್ತಾರಂತೆ.

Advertisement

ದೊನ್ನೆ ಬಿರಿಯಾನಿಗೆ ಅವಾರ್ಡ್‌
ಶಿವಾಜಿ ಮಿಲ್ಟ್ರಿ ಹೋಟೆಲ್‌ನ ದೊನ್ನೆ ಬಿರಿಯಾನಿಗೆ 2010ರಲ್ಲಿ ಬುರ್ರಪ್‌ ಕಂಪನಿಯು ಕ್ರೆಡಿಟೆಡ್‌ ಅವಾರ್ಡ್‌ ನೀಡಿ ಬೆನ್ನು ತಟ್ಟಿದೆ. ನಟ ಶಾರೂಖ್‌ ಖಾನ್‌ ಈ ಪ್ರಶಸ್ತಿ ವಿತರಿಸಿದ್ದಾರೆ. ಹೋಟೆಲ್‌ಗೆ ಜೆಡಿ ಅವಾರ್ಡ್‌ ಸಿಕ್ಕಿದ್ದು, ಜೊಮ್ಯಾಟೊ ಕಂಪನಿಯು ಬಳಕೆದಾರರ ಶಿಫಾರಸಿನ ಪ್ರಸಿದ್ಧ ಹೋಟೆಲ್‌ ಎಂದು ಗುರುತಿಸಿ, ಗೋಲ್ಡನ್‌ ಸ್ಟಾರ್‌ ನೀಡಿದೆ. ಇಷ್ಟೇ ಅಲ್ಲದೆ ನಟ ಗಣೇಶ್‌, ದುನಿಯಾ ವಿಜಿ, ತಮ್ಮ ಸಿನಿಮಾಗಳಲ್ಲಿ ಹೋಟೆಲ್‌ನ ಹೆಸರನ್ನು ಬಳಸಿ, ಇದು ಮತ್ತಷ್ಟು ಜನಪ್ರಿಯವಾಗಲು ಕಾರಣರಾಗಿದ್ದಾರೆ.

ಇದು ನಾಟಿ ಹೋಟೆಲ್‌!
ಹೋಟೆಲ್‌ನಲ್ಲಿ ಏನೆಲ್ಲಾ ಸಿಗುತ್ತೆ ಅಂದರೆ, ಕಾಲ್‌ ಸೂಪ್‌, ಮಟನ್‌ ಲಿವರ್‌, ಚಿಲ್ಲಿ ಚಿಕನ್‌, ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಚಿಕನ್‌ ಲೆಗ್‌ ಪೀಸ್‌, ಚಿಕನ್‌ ಫ್ರೈ, ಮಟನ್‌ ಫ್ರೈ , ಮಟನ್‌ ಚಾಪ್ಸ್‌, ಚಿಕನ್‌ ಚಾಪ್ಸ್‌ ಎಂದು ಪಟ ಪಟನೆ ಹೇಳುತ್ತಾ, ಮೆನುವನ್ನು ಕೈಗಿಡುತ್ತಾರೆ. ಹಾವೇರಿ, ಬಂಡೂರು, ಅಕ್ಕಿರಾಂಪುರ, ಚಿತ್ರದುರ್ಗ ಮುಂತಾದ ದೂರದ ಸಂತೆಗಳಿಂದ ನಾಟಿ ಮಟನ್‌ ಖರೀದಿಸುವ ಇವರು, ಸ್ವತಃ ಬೆಳೆದ ಮೆಣಸಿನಕಾಯಿ, ಶುಂಠಿ, ಪುದೀನ, ಟೊಮೇಟೊದಿಂದ ಅಡುಗೆ ಮಾಡುತ್ತಾರಂತೆ. ಅಡುಗೆ ಪದಾರ್ಥಗಳೆಲ್ಲವೂ ನಾಟಿ ಎನ್ನುವುದು ಈ ಹೋಟೆಲ್‌ನ ವೈಶಿಷ್ಟé.

ಇದು “ರೆಬಲ್‌’ ಅಡ್ಡಾ!
ನಟ ಅಂಬರೀಷ್‌ಗೂ, ಈ ಹೋಟೆಲ್‌ಗ‌ೂ ಅವಿನಾಭಾವ ನಂಟು
ಇತ್ತಂತೆ. ಶೂಟಿಂಗ್‌ನಿಂದ ಬಿಡುವು ಸಿಕ್ಕಾಗೆಲ್ಲಾ, ಅಂಬಿ ಸ್ನೇಹಿತರ ಜೊತೆ
ಈ ಹೋಟೆಲ್‌ಗೆ ಲಗ್ಗೆ ಇಡುತ್ತಿದ್ದರಂತೆ. ಇಲ್ಲಿನ ಮಟನ್‌ ಬಿರಿಯಾನಿ
ಅಂದ್ರೆ ಅವರಿಗೆ ಭಾರೀ ಇಷ್ಟವಂತೆ. ನಟ ದರ್ಶನ್‌, ಯಶ್‌, ವಿಜಿ ಕೂಡಾ
ಈ ಹೋಟೆಲ್‌ ಅಡುಗೆಯನ್ನು ಸವಿದು, ಮೆಚ್ಚಿದ್ದಾರೆ.

ಎಲ್ಲಿದೆ?: ನಂ. 718, 45ನೇ ಕ್ರಾಸ್‌, 1 “ಸಿ’ ಮೇನ್‌, ಜಯನಗರ
8ನೇ ಬ್ಲಾಕ್‌
ಸಮಯ: ಪ್ರತಿದಿನ (ಸೋಮವಾರ ರಜೆ) ಬೆಳಗ್ಗೆ 8.30-3.30

ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next