ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ-ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಸೋಮವಾರ ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸಲಾಯಿತು. ದೇವಸ್ಥಾನಗಳಲ್ಲಿ, ಪ್ರತಿಮೆಗಳ ಎದುರು ತೊಟ್ಟಿಲು ತೂಗುವ ಮೂಲಕ ಶಿವಾಜಿ ಜಯಂತಿ ಆಚರಿಸಲಾಯಿತು.
ಕೆಲವು ಕಡೆಗಳಲ್ಲಿ ಜಯಂತಿ ನಿಮಿತ್ತ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನೂ ಮಾಡಲಾಯಿತು. ನಗರದ ಶಹಾಪುರದಲ್ಲಿರುವ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿರುವ ಶಿವಾಜಿ ಮೂರ್ತಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ನಂತರ ಜ್ಯೋತಿಯನ್ನು ತಂದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಭಯ ಪಾಟೀಲ, ಎರಡು ವರ್ಷಗಳ ಕಾಲ ಕೊರೊನಾ ಸಂಕಷ್ಟದಿಂದ ಶಿವಾಜಿ ಜಯಂತಿ ಆಚರಿಸಲಾಗಿರಲಿಲ್ಲ.
ಈ ಸಲ ಅತ್ಯಂತ ಸಂಭ್ರಮದಿಂದ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ. ಯುವಕರಲ್ಲಿ ಉತ್ಸಾಹ ಹೆಚ್ಚಾಗಿದೆ. ಮೇ 4ರಂದು ಭವ್ಯ ಮೆರವಣಿಗೆಯಲ್ಲಿ ರೂಪಕ ವಾಹನಗಳು ಪಾಲ್ಗೊಳ್ಳಲಿವೆ. ಶಿವಾಜಿ ಜೀವನ ಚರಿತ್ರೆ ಅನಾವರಣಗೊಳ್ಳಲಿದೆ. ಕರ್ನಾಟಕದಲ್ಲಿ ಮೈಸೂರು ದಸರಾ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಕಲಾವಿದರು ಬೆಳಗಾವಿಯ ಶಿವಜಯಂತಿ ಮೆರವಣಿಗೆಯಲ್ಲಿ ಕಂಡು ಬರುತ್ತಾರೆ. ಮೈಸೂರಿಗೆ ಹೇಗೆ ದೇಶ, ವಿದೇಶದಿಂದ ಜನ ಬರುತ್ತಾರೋ ಹಾಗೆಯೇ ಬೆಳಗಾವಿಯ ಶಿವಜಯಂತಿಗೆ ಉತ್ತಮ ಪ್ರಚಾರ ಕೊಟ್ಟರೆ ಇದೂ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಲಿದೆ ಎಂದರು.
ಮರಾಠಾ ಸಮಾಜದಿಂದ ವಿಶೇಷ ಪೂಜೆ: ಬೆಳಗಾವಿ ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಶಿವಾಜಿ ಉದ್ಯಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಕಿರಣ ಜಾಧವ, ರಮಾಕಾಂತ ಕೊಂಡುಸ್ಕರ ವಿಶೇಷ ಪೂಜೆ ಸಲ್ಲಿಸಿದರು. ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಕಲ ಮರಾಠಾ ಸಮಾಜವು ಒಂದಾಗಬೇಕು. ಶಿವಾಜಿ ಮಹಾರಾಜರು ನೀಡಿರುವ ಸಂದೇಶ ನಮಗೆಲ್ಲ ಪ್ರೇರಣೆಯಾಗಿದೆ. ಕೇವಲ ಜಯಂತಿಗೆ ಸೀಮಿತಗೊಳಿಸದೇ ಇಡೀ ಜೀವನದಲ್ಲಿ ಶಿವಾಜಿ ನಮಗೆ ಮಾರ್ಗದರ್ಶಕರಾಗಬೇಕು. ಆಗ ಜೀವನ ಪಾವನವಾಗುತ್ತದೆ ಎಂದು ಕಿರಣ ಜಾಧವ ಹೇಳಿದರು. ಮುಖಂಡರಾದ ಸುನೀಲ ಜಾಧವ, ಮಹಾದೇವ ಪಾಟೀಲ, ಸಾಗರ ಪಾಟೀಲ ಸೇರಿದಂತೆ ಇತರರು ಇದ್ದರು.