ಬೆಂಗಳೂರು: ಛತ್ರಪತಿ ಶಿವಾಜಿಯ 395ನೇ ಜಯಂತಿ ಹಿನ್ನೆಲೆ ಸದಾಶಿವನಗರದ ಭಾಷಂ ಸರ್ಕಲ್ ನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದ ವೀರ ಹೋರಾಟಗಾರ ಶಿವಾಜಿ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಅವರ ದಿಟ್ಟತನದಿಂದ ಹಿಂದೂ ಸಾಮ್ರಾಜ್ಯ ಗಟ್ಟಿತನವಾಗಿ ಉಳಿದಿದೆ. ಶಿವಾಜಿ ಮಹಾರಾಜರು ಇಡೀ ದೇಶಕ್ಕೆ ಸೇರಿದಂತವರು. ಶಿವಾಜಿ ಮಹರಾಜರ ಹೆಸರಲ್ಲಿ ಶಕ್ತಿ ಸ್ಪೂರ್ತಿ ಇದೆ. ಅವರ ತತ್ವ ಆದರ್ಶಗಳನ್ನು ರಾಜ್ಯದಲ್ಲೂ ತರುವ ಕೆಲಸ ಮಾಡುತ್ತೇವೆ ಎಂದರು.
ಶಿವಾಜಿ ಜಯಂತಿಯಂದು ಮರಾಠಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕವಾಗಲಿದ್ದು, ನಿಗಮಕ್ಕೆ ಇಂದು ಅಧ್ಯಕ್ಷರ ನೇಮಿಸಿ ಸರ್ಕಾರದಿಂದ ಆದೇಶ ಪ್ರಕಟಿಸಲಾಗುತ್ತದೆ. ಮಾರುತಿರಾವ್ ಮುಳೆ ಅವರನ್ನು ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಲು ನಿರ್ಧರಿಸಲಾಗಿದೆ. ಬಜೆಟ್ ನಲ್ಲಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.
ಆದೇಶ ಎಲ್ಲರೂ ಪಾಲನೆ ಮಾಡಬೇಕು
ಹಿಜಾಬ್ ವಿವಾದದ ಕುರಿತು ಮಾತನಾಡಿದ ಅವರು, ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಹೊರಗಿನವರಿಂದ ಈ ರೀತಿಯ ಸಮಸ್ಯೆಗಳು ಆಗುತ್ತಿವೆ. ಹೀಗಾಗಿ ಶಾಲಾ ಕಾಲೇಜುಗಳ ಮ್ಯಾನೇಜ್ಮೆಂಟ್ ಅಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತದೆ. ಆದರೆ ಕುಂಕುಮ ತಿಲಕ ಕುರಿತು ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆಯುತ್ತೇನೆ ಎಂದರು.
ಶಾಲಾ – ಕಾಲೇಜುಗಳ ಬಳಿ ಸೌಹಾರ್ದ ವಾತಾವರಣ ಮೂಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಶಾಲಾ ಕಾಲೇಜು ಆಡಳಿತ ಮಂಡಳಿ ಮಾಡಲಿದೆ.
ಇದನ್ನೂ ಓದಿ:ಸ್ಪೀಕರ್ ಪ್ರಸ್ತಾಪದ ಬಳಿಕ ಉತ್ತರ ಕನ್ನಡದಲ್ಲಿಅಡಿಕೆ ದೋಟಿ ಸಬ್ಸಿಡಿ ಒತ್ತಡ
ಈ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಶಾಸಕ ಶ್ರೀನಿವಾಸ್ ಮಾನೆ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸೇರಿ ಗಣ್ಯರು ಉಪಸ್ಥಿತರಿದ್ದರು.