Advertisement

ನಾಟಕವಾದ ದೈವದ ಕತೆ ಶಿವದೂತೆ ಗುಳಿಗೆ

06:10 PM Jan 31, 2020 | mahesh |

ಗುಳಿಗ ದೈವದ ಪಾಡ್ದನದ ಹಿನ್ನೆಲೆಯಲ್ಲಿ ನಾಟಕ ಸಾಗುತ್ತದೆ. ಈ ಮೂಲಕ ನಾಟಕಕ್ಕೊಂದು ದೈವಿಕ ನೈಜತೆಯನ್ನು ಕಟ್ಟಿಕೊಡಲು ಯತ್ನಿಸಲಾಗಿದೆ. ಗುಳಿಗನ ಹುಟ್ಟಿನ ಪೌರಾಣಿಕ ಹಿನ್ನೆಲೆ, ವಿಷ್ಣುವಿನ ಭೇಟಿ, ತಾಯಿಯ ಎದೆಯನ್ನು ಸೀಳಿಕೊಂಡು ಹೊರಬಂದು ಹಸಿವನ್ನು ನೀಗಿಸುವ ಅಲೆದಾಟ, ಕಾರಣಿಕಗಳ ಪ್ರದರ್ಶನ, ಕೋರಬ್ಬುವಿನ ಭೇಟಿ, ಬ್ರಹ್ಮ ರಕ್ಕಸ ಇತ್ಯಾದಿ ದೃಶ್ಯಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತವೆ.

Advertisement

ನವ್ಯ, ಪೌರಾಣಿಕ ಅದ್ದೂರಿ ದೃಶ್ಯ ಸಂಯೋಜನೆಯ ಸಂಗಮ ಪೌರಾಣಿಕ ದೇವ, ದೇವತೆಗಳ, ರಾಮಾಯಣ ಮಹಾಭಾರತದ ಕತೆಗಳು ನಾಟಕ ರೂಪದಲ್ಲಿ ಮೂಡಿ ಬಂದು ವೇದಿಕೆಗಳಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುವುದು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುತ್ತದೆ. ಆದರೆ ತುಳುನಾಡಿನ ಆರಾಧ್ಯ ದೈವಗಳ ಅದ್ದೂರಿಯ ನಾಟಕ ಪ್ರದರ್ಶನವಾಗುವುದು ಬಹಳ ಕಡಿಮೆ. ಈಗ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ತಮ್ಮ “ಶಿವದೂತ ಗುಳಿಗ’ ನಾಟಕದ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ದೈವಗಳ ಬಗ್ಗೆಯೂ ಈ ರೀತಿಯ ನಾಟಕಗಳನ್ನು ರಚಿಸಬಹುದು ಎಂಬ ಮಾರ್ಗದರ್ಶನ ಮಾಡಿದ್ದಾರೆ.

ದೈವದ ಬಗ್ಗೆ ತಿಳುವಳಿಕೆಯೇ ಇಲ್ಲದ ಆಧುನಿಕ ಮನೋಭಾವನೆಯ ಯುವಕನೋರ್ವನಿಗೆ ಗುಳಿಗ ದೈವದ ಕತೆಯನ್ನು ಹೇಳುವ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕವು ಮೈ ನವಿರೇಳಿಸುವ ದೃಶ್ಯಗಳಿಂದ ಕೂಡಿದೆ. ಕೈಲಾಸ, ವೈಕುಂಠ, ಪುರಾತನ ಕಾಲದ ಮನೆ, ದೈವಸ್ಥಾನ ಇತ್ಯಾದಿ ದೃಶ್ಯಾವಳಿಗಳನ್ನು ಕಾಯುವ ಅವಕಾಶವನ್ನೇ ಕೊಡದೆ ಒಂದೆರಡು ನಿಮಿಷಗಳಲ್ಲಿಯೇ ಬದಲಿಸಿ ಬಿಡುವ ಕೈ ಚಳಕ ಅದ್ಭು ತ. ನವ್ಯ ಮತ್ತು ಪೌರಾಣಿಕ ನಾಟಕದ ದೃಶ್ಯ ಸಂಯೋಜನೆಯ ಸಮ್ಮಿಳನ ಮನಮೋಹಕವಾಗಿದೆ.

ಗುಳಿಗ ದೈವದ ಪಾಡªನದ ಹಿನ್ನೆಲೆಯಲ್ಲಿ ಈ ನಾಟಕವು ಸಾಗುತ್ತದೆ. ಈ ಮೂಲಕ ನಾಟಕಕ್ಕೊಂದು ದೈವಿಕ ನೈಜತೆಯನ್ನು ಕಟ್ಟಿಕೊಡಲು ಯತ್ನಿಸಲಾಗಿರುವುದು ಪ್ರಶಂಸನೀಯ. ಗುಳಿಗನ ಹುಟ್ಟಿನ ಪೌರಾಣಿಕ ಹಿನ್ನೆಲೆ, ವಿಷ್ಣುವಿನ ಭೇಟಿ, ತಾಯಿಯ ಎದೆಯನ್ನು ಸೀಳಿಕೊಂಡು ಹೊರಬಂದು ಹಸಿವನ್ನು ನೀಗಿಸುವ ಅಲೆದಾಟ, ವಿವಿಧೆಡೆಗಳಲ್ಲಿ ಕಾರಣಿಕಗಳ ಪ್ರದರ್ಶನ, ಕಾರಣಿಕ ದೈವ ಕೋಡಿಕಂಡಾಲ ಕೋರªಬ್ಬುವಿನ ಭೇಟಿ, ಬ್ರಹ್ಮ ರಕ್ಕಸ ಇತ್ಯಾದಿ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲದಿಂದ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುವಲ್ಲಿ ವಿಜಯಕುಮಾರ್‌ ಯಶಸ್ವಿಯಾಗಿದ್ದಾರೆ.

ಶಿವದೂತ ಗುಳಿಗನ ಕಾರಣಿಕವನ್ನು ಎರಡೂವರೆ ಗಂಟೆಗಳ ಸೀಮಿತ ಅವಧಿಯಲ್ಲಿ ಕಟ್ಟಿಕೊಟ್ಟ ಕೊಡಿಯಾಲ್‌ಬೈಲ್‌ ಅವರು ಮುಂದಿನ ದಿನಗಳಲ್ಲಿ ನಾಟಕ ಪ್ರದರ್ಶಿತವಾಗುವ ಪ್ರದೇಶದ ಪ್ರಾದೇಶಿಕ ಗುಳಿಗನ ಕತೆಗೆ ಅನುಗುಣವಾಗಿ ದೃಶ್ಯ ವಿಸ್ತರಣೆ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಅನಿಸುತ್ತಿದೆ.

Advertisement

ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ನಾಟಕದ ಪ್ರಥಮ ಪ್ರದರ್ಶನ ನಡೆದಾಗ ಈ ನಾಟಕದ ಪ್ರತಿಯೊಂದು ದೃಶ್ಯವು ಚಪ್ಪಾಳೆಗಳ ಪ್ರಶಂಸೆಯನ್ನು ಗಳಿಸಿತು. ಈಗಾಗಲೇ ಈ ನಾಟಕದ ಐವತ್ತು ಪ್ರದರ್ಶನಗಳು ಮುಂಗಡ ಬುಕ್ಕಿಂಗ್‌ ಆಗಿರುವುದು ವಿಜಯಕುಮಾರ್‌ ಅವರ ಮೇಲೆ ಕಲಾಪ್ರೇಮಿಗಳಿಗೆ ಇರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಕಲಾ ಸಂಗಮ ಕಲಾವಿದರು ನಾಟಕವನ್ನು ಅರ್ಪಣೆ ಮಾಡಿದ್ದಾರೆ. ಪರಮಾನಂದ ವಿ. ಸಾಲ್ಯಾನ್‌ ಸಂಭಾಷಣೆ ನಾಟಕಕ್ಕಿದೆ. ಗುರುದೇವರ ಆರ್ಟ್ಸ್ ಬಂಟ್ವಾಳ, ಶರತ್‌ ಪೂಜಾರಿ ಮಾಲೆಮಾರ್‌ ವಸ್ತ್ರ ವಿನ್ಯಾಸಮಾಡಿದ್ದಾರೆ. ಹರೀಶ್‌ ಆಚಾರ್ಯ, ಚಂದ್ರಶೇಖರ ಶಿರ್ವ ಮಟ್ಟಾರ್‌ ರಂಗವಿನ್ಯಾಸ ಮಾಡಿದ್ದಾರೆ. ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್‌ ಕಾಪಿಕಾಡ್‌, ಡಾ| ವೈಷ್ಣವಿ, ರವೀಂದ್ರ ಪ್ರಭು, ನರಸಿಂಹ ಕಿಣಿ, ವಿಶಾಲ್‌ ರಾಜ್‌ ಕೋಕಿಲ ಇವರ ಹಿನ್ನೆಲೆ ಸಂಗೀತವಿದೆ. ಎ.ಕೆ. ವಿಜಯ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಗುಳಿಗನ ಪಾತ್ರವನ್ನು ತುಳು ಚಿತ್ರನಟ ಮತ್ತು ಕಿರುತೆರೆಯ ಕಲಾವಿದ ಸ್ವರಾಜ್‌ ಶೆಟ್ಟಿ ಮಾಡಿದ್ದಾರೆ. ನಿತೇಶ್‌ ಕಿನ್ನಿಗೋಳಿ, ವಿನೋದ್‌ ರಾಜ್‌ ಕೋಕಿಲ, ರಮೇಶ್‌ ಕಲ್ಕಡ್ಕ, ಕೀತ್‌ ಪುರ್ತಾಡೋ, ಧನು ಕುಲಾಲ್‌ ಬೊಳಂತೂರು, ಜಯರಾಮ ಅಚಾರ್ಯ ಮಂಜೇಶ್ವರ, ರಜತ್‌ ಕದ್ರಿ, ಶರಣ್‌ ಶೆಟ್ಟಿ ವೇಣೂರು, ಸಾಗರ ಮಡಂತ್ಯಾರ್‌, ರಕ್ಷಿತ ರಾವ್‌, ಕಾಜಲ್‌ ಬಂಗೇರ ನಾಟಕದಲ್ಲಿ ಅಭಿನಯಿಸಿದ್ದಾರೆ.

ಪಾಡ್ದನ ಮೂಲ ಬಾಬು ಬಲ್ಲಾಜೆ, ವಿದ್ವಾಂಸರುಗಳಾದ ಡಾ. ವಿವೇಕ್‌ ರೈ ಮತ್ತು ಗಣೇಶ್‌ ಅಮೀನ್‌ ಸಂಕಮಾರ್‌ ಅವರ ಕೃತಿಗಳನ್ನು ಆಧರಿಸಿ ನಾಟಕವನ್ನು ರಚಿಸಲಾಗಿದೆ.

ರವೀಂದ್ರ ಶೆಟ್ಟಿ ಕುತ್ತೆತ್ತೂರು

Advertisement

Udayavani is now on Telegram. Click here to join our channel and stay updated with the latest news.

Next