Advertisement

ರಾಮ ದುರ್ಗದ ಶಿವ 

05:07 AM Mar 02, 2019 | |

ನಾಳೆ ಅಲ್ಲ, ನಾಳಿದ್ದೇ ಶಿವರಾತ್ರಿ. ಈ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ, ಶಿವಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ಜಾಗರಣೆ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ.
ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ರಾತ್ರಿಯಿಡಿ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ ವಿವಾಹವಾದಳೆಂಬುದು ಪ್ರತೀತಿ.

Advertisement

ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಸವದತ್ತಿ ಮಾರ್ಗ ಮಧ್ಯದಲ್ಲಿರುವ ಮುಳ್ಳೂರು ಗುಡ್ಡದಲ್ಲಿರುವ ಬೃಹತ್‌ ಶಿವನ ಮೂರ್ತಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮುರುಡೇಶ್ವರ ಮಾದರಿಯಲ್ಲಿ ಅಂದಾಜು ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 76 ಅಡಿ ಎತ್ತರದ ಗಂಗಾ ಸ್ವರೂಪಿಯಾದ ಶಿವನಮೂರ್ತಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.

ಈ ಮೂರ್ತಿಯ ಶಿಲ್ಪಿಗಾರರು ಶ್ರೀಧರ ಮೂರ್ತಿ ಮತ್ತು ಕುಟುಂಬದವರು. ಮುರುಡೇಶ್ವರದಲ್ಲಿ ಶಿವನನ್ನು ನಿರ್ಮಿಸಿರುವವರೂ ಇವರೇ. ಮುಳ್ಳೂರ ಗುಡ್ಡದಲ್ಲಿರುವ ಶಿವನ ಮೂರ್ತಿಯ ಕೆಳಗಡೆ ಏಕಶಿಲೆಯ ಲಿಂಗವನ್ನು ಕಾಣಬಹುದು. ಈ ವಿಶಿಷ್ಟವಾದ ಲಿಂಗವನ್ನು ಮಧ್ಯಪ್ರದೇಶದ ಓಂಕಾರೇಶ್ವರದಿಂದ ತಂದು ಪ್ರತಿಷ್ಠಾಪನೆ
ಮಾಡಲಾಗಿದೆ. ಅಲ್ಲದೇ ಚಂಡಿಕೇಶ್ವರ ಹಾಗೂ ನಂದಿ ಮೂರ್ತಿಗಳೂ ಇಲ್ಲಿವೆ.


ಸುತ್ತಲೂ ಅರ್ಧನಾರೀಶ್ವರ, ರಾವಣ, ಬೇಡರಕಣ್ಣಪ್ಪ ಮುಂತಾದ ಒಂಭತ್ತು ಮೂರ್ತಿಗಳನ್ನೂ ನಿರ್ಮಾಣ ಮಾಡಿರುವುದು ವಿಶೇಷ. ಮಹಾ ಶಿವರಾತ್ರಿ ಪ್ರಯುಕ್ತ, ಶಿವನ ದೇವಾಲಯದಲ್ಲಿ ಈಗ ಸಂಭ್ರಮದ ವಾತಾವರಣ. 76 ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹದಿಂದ ಪ್ರಸಿದಿಯಾಗಿರುವ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ಸೋಮವಾರ ಶಿವ ಪ್ರತಿಷ್ಠಾನ ಸೇವಾ ಸಮಿತಿಯಿಂದ ಅನ್ನ ಸಂತರ್ಪಣೆಯೂ ನಡೆಯುತ್ತದೆ.

ಮಳ್ಳೂರು ಗುಡ್ಡ ಒಂದು ರಮಣೀಯ ಪ್ರವಾಸಿ ಕ್ಷೇತ್ರ. ಇಲ್ಲಿಗೆ ಬಂದವರು ಪ್ರವಾಸಿ ತಾಣವನ್ನು ಮಾತ್ರವಲ್ಲ, ದೇವರ ದರ್ಶನವನ್ನೂ ಮಾಡಿದಂತಾಗಬೇಕು ಎಂದು ಕನಸು ಕಂಡ ಮಾಜಿ ಶಾಸಕ ಅಶೋಕ ಪಟ್ಟಣ, ತಮ್ಮ ತಂದೆ-ತಾಯಿಯ ಇಚ್ಚೆಯಂತೆ ಮುಳ್ಳೂರ ಕಣಿವೆಯ 32 ಎಕರೆಗಳ ವಿಶಾಲವಾದ ಪ್ರದೇಶದಲಿ ಈ ಬೃಹತ್‌ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

ಈ ವಿಶಿಷ್ಟ ಧಾರ್ಮಿಕ ಹಾಗೂ ಪ್ರವಾಸಿ ತಾಣವು ಸವದತ್ತಿ, ಎಲ್ಲಮ್ಮ, ಬದಾಮಿಯ ಬನಶಂಕರಿ, ಗೊಡಚಿ ವೀರಭದ್ರೇಶ್ವರ ಕ್ಷೇತ್ರಗಳ ಮಧ್ಯೆ ಇರುವುದು ಇನ್ನೊಂದು ವಿಶೇಷ. ಹೀಗಾಗಿ ಮಳ್ಳೂರಿಗೆ ಬಂದವರು ಈ ಎಲ್ಲಾ ಕ್ಷೇತ್ರಕ್ಕೆ ಭೇಟಿ ಕೊಡಬಹುದು. ಶಿವ ದೇವಾಲಯದ ಸಮೀಪದಲ್ಲಿಯೇ ಸಾಯಿ ದೇವಸ್ಥಾನವೂ ಬಿಳಿ ಶಿಲೆಯಲ್ಲಿ
ನಿರ್ಮಾಣವಾಗುತ್ತಿದೆ.

Advertisement

ಸುರೇಶ ಗುದಗನವರ

Advertisement

Udayavani is now on Telegram. Click here to join our channel and stay updated with the latest news.

Next