Advertisement

ನಾವೇ ರಿಮೋಟ್‌ ಕಂಟ್ರೋಲ್‌: ಸಮಾನ ಅಧಿಕಾರಕ್ಕಾಗಿ ಶಿವಸೇನೆ ಆಗ್ರಹ

09:44 AM Oct 29, 2019 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನ ಸಭೆಯ ರಿಮೋಟ್‌ ಕಂಟ್ರೋಲ್‌ ನಮ್ಮ ಕೈಯಲ್ಲಿದೆ. ಆದುದರಿಂದ ನಮ್ಮ ಮಾತಿಗೂ ಮಾನ್ಯತೆ ಇರಲೇಬೇಕು ಎಂದು ಶಿವಸೇನೆ ಹೇಳಿದೆ.

Advertisement

2014ಕ್ಕೆ ಹೋಲಿಸಿದರೆ 2019ರ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷವು ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಈಗ ಮಹಾರಾಷ್ಟ್ರದಲ್ಲಿ ಅಧಿಕಾರದ ರಿಮೋಟ್‌ ಕಂಟ್ರೋಲ್‌ ಅನ್ನು ಹೊಂದಿದೆ ಎಂದು ಶಿವಸೇನೆ ಹೇಳಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸಾಧನೆ ತೋರಿದ ಅನಂತರ ಉಭಯ ಮಿತ್ರಪಕ್ಷಗಳು ಸರಕಾರ ರಚನೆಯ ವಿಷಯ ದಲ್ಲಿನ ಮಾತುಕತೆ ನಿರೀಕ್ಷಿಸಿದಷ್ಟು ಸರಾಗವಾಗಿ ನಡೆಯುತ್ತಿಲ್ಲ. ಬಿಜೆಪಿ 2014ರಲ್ಲಿ 122 ಸ್ಥಾನ ಪಡೆದಿದ್ದರೆ, ಈ ಬಾರಿ 105 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.

50-50ರ ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲಿಖೀತ ಭರವಸೆ ನೀಡಬೇಕು ಮತ್ತು ಮುಖ್ಯಮಂತ್ರಿ  ಹುದ್ದೆಯನ್ನು ಅರ್ಧ ಅವಧಿಗೆ ಉದ್ಧವ್‌ ಠಾಕ್ರೆ ಪುತ್ರ, ಯುವ ನಾಯಕ ಆದಿತ್ಯ ಠಾಕ್ರೆ ಅವರಿಗೆ ಬಿಟ್ಟು ಕೊಡಬೇಕೆಂದು ಶಿವಸೇನೆ ಆಗ್ರಹಿಸಿದೆ.

ಶಿವಸೇನೆ ಈ ಬಾರಿ ಕಡಿಮೆ ಸ್ಥಾನಗಳನ್ನು ಗೆದ್ದಿದೆ ಯಾದರೂ ಅಧಿಕಾರದ ರಿಮೋಟ್‌ ಕಂಟ್ರೋಲ್‌ ಅನ್ನು ತನ್ನ ಬಳಿ ಹೊಂದಿದೆ ಎಂದು ಶಿವಸೇನೆ ಮುಖವಾಣಿ “ಸಾಮ್ನಾ’ದಲ್ಲಿನ “ರೋಖ್‌ಟೋಕ್‌’ ಎಂಬ ಅಂಕಣದಲ್ಲಿ ಸಂಜಯ್‌ ರಾವುತ್‌ ಅವರು ಹೇಳಿದ್ದಾರೆ.

Advertisement

ಶಿವಸೇನೆಯನ್ನು ಬಿಜೆಪಿಯ ಹಿಂದೆ ಇರಿಸುವ ಕನಸು ಭಗ್ನವಾಗಿದೆ. ಕೈಯಲ್ಲಿ ಕಮಲವನ್ನು (ಬಿಜೆಪಿಯ ಚಿಹ್ನೆ) ಹಿಡಿದಿಟ್ಟುಕೊಂಡಿರುವ ಹುಲಿಯನ್ನು (ಶಿವಸೇನೆಯ ಗುರುತು) ತೋರಿಸುವ ವ್ಯಂಗ್ಯಚಿತ್ರವು ಪ್ರಸ್ತುತ ಸನ್ನಿವೇಶದ ಬಗ್ಗೆ ಬಹಳಷ್ಟು ಹೇಳುತ್ತದೆ. ಪ್ರಸ್ತುತ ಜನಾದೇಶವು ಯಾರನ್ನೂ ಲಘುವಾಗಿ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನು ನೀಡಿದೆ ಎಂದು ಶಿವಸೇನೆ ಸಂಸದ ರಾವುತ್‌ ತಮ್ಮ ಅಂಕಣದಲ್ಲಿ ಉಲ್ಲೇಖೀಸಿದ್ದಾರೆ. ರಾವುತ್‌ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಮತ್ತು ಸಂಸತ್ತಿನಲ್ಲಿ ಪಕ್ಷದ ಮುಖ್ಯ ವಿಪ್‌ ಕೂಡ ಆಗಿದ್ದಾರೆ.

ಈ ಚುನಾವಣ ಫಲಿತಾಂಶವು ಕಾಂಗ್ರೆಸ್‌-ಎನ್‌ಸಿಪಿಯ ಪ್ರಮುಖ ನಾಯಕರಿಗೆ ಆಮಿಷವೊಡ್ಡುವ ಮೂಲಕ ಅಥವಾ ಬೆದರಿಕೆ ಹಾಕುವ ಮೂಲಕ ಅವರನ್ನು° ಪಕ್ಷಕ್ಕೆ ಸೇರಿಸಿಕೊಂಡು ಸಂಖ್ಯಾಬಲ ವನ್ನು ಹೆಚ್ಚಿಸುವ ಅನೈತಿಕ ಆಲೋಚನೆಗಳ ಸೋಲು ಆಗಿದೆ ಎಂದಿದ್ದಾರೆ.

ನಾಲ್ವರು ಪಕ್ಷೇತರರು ಶಿವಸೇನೆಗೆ ಬೆಂಬಲ
ವಿಧಾನಸಭಾ ಚುನಾವಣೆ ಫಲಿತಾಂಶದ ವೇಳೆ 56 ಶಾಸಕರ ಸಂಖ್ಯಾಬಲವನ್ನು ಹೊಂದಿದ ಶಿವಸೇನೆಯು ಪಕ್ಷೇತರ ಶಾಸಕರ ಬೆಂಬಲದಿಂದ ತನ್ನ ಬಲವನ್ನು ಹೆಚ್ಚಿಸಿದೆ. ಇಲ್ಲಿಯ ತನಕ ನಾಲ್ವರು ಪಕ್ಷೇತರ ಶಾಸಕರು ಶಿವಸೇನೆಗೆ ಬೆಂಬಲ ಘೋಷಿಸುವ ಮೂಲಕ ಈ ಸಂಖ್ಯಾಬಲ 60ಕ್ಕೆ ತಲುಪಿದೆ.

ಪ್ರಹಾರ್‌ ಜನಶಕ್ತಿ ಪಕ್ಷವು ಶಿವಸೇನೆಯನ್ನು ಬೆಂಬಲಿಸಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನೂ ಭೇಟಿಯಾದ ಪ್ರಹಾರ್‌ ಜನಶಕ್ತಿಯ ಇಬ್ಬರು ಶಾಸಕರು ಶಿವಸೇನೆ ಬೆಂಬಲಿಸಿದ್ದಾರೆ. ಶಿವಸೇನೆ ನಾಯಕ ಏಕನಾಥ ಶಿಂಧೆ ಅವರ ಉಪಸ್ಥಿತಿಯಲ್ಲಿ ಶಾಸಕ ಬಚ್ಚು ಕಡೂ ಹಾಗೂ ಶಾಸಕ ರಾಜ್‌ಕುಮಾರ್‌ ಪಟೇಲ್‌ ಅವರು ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗಿ ಬೆಂಬಲವನ್ನು ಘೋಷಿಸಿದ್ದಾರೆ.

ವಿಧಾನಸಭಾ ಚುನಾವಣೆಯ ಫಲಿತಾಂಶದ ಅನಂತರ ರಾಮ್‌ಟೇಕ್‌ ವಿಧಾನಸಭಾ ಕ್ಷೇತ್ರ ದಿಂದ ಪಕ್ಷೇತರ ಶಾಸಕ ಆಶಿಶ್‌ ಜೈಸ್ವಾಲ್‌ ಮತ್ತು ಭಂಡಾರದ ಪಕ್ಷೇತರ ಶಾಸಕ ನರೇಂದ್ರ ಗೊಂಡೇಕರ್‌ ಅವರು ಈಗಾಗಲೇ ಶಿವಸೇನೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಪ್ರಸಕ್ತ ಪ್ರಹಾರ್‌ ಜನಶಕ್ತಿಯ ಇಬ್ಬರು ಶಾಸಕರು ಶಿವಸೇನೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಶಿವಸೇನೆಯ ಶಾಸಕರ ಸಂಖ್ಯಾಬಲ 60ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next