ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ʼಘೋಸ್ಟ್ʼ ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಶಿವಣ್ಣ ʼಜೈಲರ್ʼ ಬಳಿಕ ಪ್ಯಾನ್ ಇಂಡಿಯಾ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ರಜಿನಿಕಾಂತ್ ಸಿನಿಮಾದ ಬಳಿಕ ಅವರಿಗೆ ಅನೇಕ ಸಿನಿರಂಗದಿಂದ ಆಫರ್ ಬರುತ್ತಿದೆ. ಆದರೆ ʼಜೈಲರ್ʼ ಮೊದಲು ಕೂಡ ಸೆಂಚುರಿ ಸ್ಟಾರ್ ಗೆ ಬೇರೆ ಸಿನಿಮಾ ರಂಗದಿಂದ ಬಂದಿತ್ತು ಎನ್ನುವುದರ ಬಗ್ಗೆ ಸ್ವತಃ ಶಿವಣ್ಣ ಅವರೇ ಹೇಳಿದ್ದಾರೆ.
ʼ ಗಲಾಟ್ಟಾ ಪ್ಲಸ್ʼ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್ ʼಜೈಲರ್ʼ ಸಿನಿಮಾದಲ್ಲಿನ ʼನರಸಿಂಹʼ ಪಾತ್ರಕ್ಕೂ ಮೊದಲು ಅವರಿಗೆ ಬೇರೆ ಸಿನಿಮಾದ ಆಫರ್ ಬಂದಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
“ಈ ಹಿಂದೆ ಕೂಡ ಅಂದರೆ 7-8 ವರ್ಷಗಳ ಹಿಂದೆ ನನಗೆ ತಮಿಳು ಸಿನಿಮಾರಂಗದಿಂದ ಆಫರ್ ಬಂದಿತ್ತು. ಅಜಿತ್ ಸಿನಿಮಾದಲ್ಲಿ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸುವಂತೆ ನನ್ನನ್ನು ಸಂಪರ್ಕ ಮಾಡಲಾಗಿತ್ತು. ಅದು ಯಾವ ಸಿನಿಮಾ ಎನ್ನುವುದು ನೆನಪಿಲ್ಲ. ಆದರೆ ಆ ಸಮಯದಲ್ಲಿ ನಾನು ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಆಫರ್ ನ್ನು ಒಪ್ಪಿಕೊಳ್ಳಲು ಆಗಿಲ್ಲ. ಒಂದು ವೇಳೆ ನಾನು ಅಂದು ಬೇರೆ ಭಾಷೆಗೆ ಡೇಟ್ ಕೊಟ್ಟಿದರೆ, ನನ್ನ ಕನ್ನಡ ಸಹೋದ್ಯೋಗಿಗಳು ನನಗೆ ಯಾವುದೇ ನೈತಿಕತೆ ಇಲ್ಲ ಎಂದು ಭಾವಿಸುತ್ತಿದ್ದರೇನೋ. ವೈಯಕ್ತಿಕವಾಗಿ ನಾನು ತಮಿಳು ಭಾಷೆಯನ್ನು ಇಷ್ಟಪಡುತ್ತೇನೆ ಏಕೆಂದರೆ ನಾನು ಅಲ್ಲಿ ಹುಟ್ಟಿದ್ದೇನೆ.” ಎಂದು ನಟ ಹೇಳಿದರು.
“ನನಗೆ ನಿರ್ಮಾಪಕರನ್ನು ತೊಂದರೆಗೆ ಸಿಲುಕಿಸಲು ಇಷ್ಟವಿಲ್ಲ. ನನ್ನ ತಂದೆ ಯಾವಾಗಲೂ ನನಗೆ ನಿರ್ಮಾಪಕರು ಅನ್ನದಾತರು ಎಂದು ಹೇಳುತ್ತಿದ್ದರು. ಹಾಗಾಗಿ ನಾನು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ತಮಿಳು ಚಿತ್ರರಂಗದಲ್ಲಿ ಸಾಕಷ್ಟು ನಾಯಕರಿದ್ದಾರೆ. ತಮಿಳು ಇಂಡಸ್ಟ್ರಿಗೆ ಬರಬೇಕಾದರೆ ಏನಾದರೂ ವಿಶೇಷತೆ ಇರಬೇಕು” ಎಂದು ಶಿವಣ್ಣ ಹೇಳಿದರು.
ಇನ್ನು ಶಿವರಾಜ್ ಕುಮಾರ್ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಬಹುಕೋಟಿ ನಿರ್ಮಿತ ʼಕಣ್ಣಪ್ಪʼ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ ಎನ್ನಲಾಗಿದೆ.