ಧಾರವಾಡ : ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧಿಸಿರುವುದು ಸ್ವಾಗತಾರ್ಹ. ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲ ವ್ಯಕ್ತಿಗಳ ವಿರುದ್ಧ ಇದೇ ರೀತಿ ತನಿಖೆ ನಡೆಸುವ ಮೂಲಕ ಅಕ್ರಮ ಸಂಪಾದನೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ತಕ್ಕಪಾಠ ಕಲಿಸುವ ಪ್ರಯತ್ನವಾಗಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಮೇಲೆ ಮೈನ್ಸ್, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹ ಮಾಡಿದರು.
ಡಿಕೆಶಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳಿಗೆ ಕಡಿವಾಣ ಹಾಕಲು ೨೦೧೪ರಿಂದಲೇ ಸಪಸ ವತಿಯಿಂದ ಅಧಿಕೃತ ದಾಖಲೆಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಮಾಡಿದೆ. ಇಡಿ, ಸಿಬಿಐ, ಎಸ್‌ಐಟಿಗೆ ಬರೆದ ಪತ್ರದ ಮೇರೆಗೆ ಡಿಕೆಶಿ ಹಾಗೂ ಸಂಬಂಧಿಕರ ಮನೆ ಮೇಲೆ ನಡೆದ ದಾಳಿಯಲ್ಲಿ ರೂ.೨೫೦ಕೋಟಿ ಹಣ ಬಚ್ಚಿಟ್ಟ ಆರೋಪವಿದೆ ಎಂದರು.
ಅಲ್ಲದೇ, ದೆಹಲಿಯ ಅರ್ಪಾಟಮೆಂಟ್‌ಗಳ ಮೇಲೂ ದಾಳಿ ನಡೆಸಿ ಅಕ್ರಮ ಹಣ ವಶಕ್ಕೆ ಪೆಡದು, ಡಿಕೆಶಿ ಹಾಗೂ ಆತನ ನಾಲ್ವರು ಸಹದ್ಯೋಗಿಗಳ ವಿರುದ್ಧ ಪಿಎಂಎಲ್‌ಎ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಭ್ರಷ್ಟಾಚಾರ ಕಿಂಗ್ ಪಿನ್ ಆಗಿರುವ ಡಿಕೆಶಿ ವಿಷಯದಲ್ಲಿ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ತನಿಖೆಗೆ ಆಗ್ರಹ:
ರಾಜ್ಯ ಸರ್ಕಾರ ೨೦೧೩ರಲ್ಲಿ ಮಾಡಿದ ಎಪಿಪಿ ಹಾಗೂ ಎಜಿಪಿ ೧೯೭ ಹುದ್ದೆಗಳ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಜಾರ್ಜ್‌ಶೀಟ್ ಸಲ್ಲಿಕೆ ಅನ್ವಯ ಹೈಕೊರ್ಟ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವ ಮೂಲಕ ಪ್ರಕರಣವನ್ನು ತಾತ್ವಿಕ ಹಂತಕ್ಕೆ ಒಯ್ಯಲು ಆಗ್ರಹಿಸಿದರು.