ಹುಬ್ಬಳ್ಳಿ : ಯಾವುದೇ ಪಕ್ಷ ಸರಕಾರ ರಚನೆ ಮಾಡದಂತಹ ಪರಿಸ್ಥಿತಿಯನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ನಿರ್ಮಿಸಿದ್ದು, ಆ ರಾಜ್ಯದ ಮತದಾರರ ತೀರ್ಪನ್ನು ಶಿವಸೇನೆ ನಾಯಕರು ಬುಡಮೇಲು ಮಾಡ ಹೊರಟಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಹೊಂದಾಣಿಕೆಯಂತೆ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಅವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಒಪ್ಪಂದವಾಗಿತ್ತು. ಹಿಂದೆ ಸಾಕಷ್ಟು ಬಾರಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಟೀಕಿಸಿದಾಗಲೂ ಹಳೆಯ ಸ್ನೇಹಿತರು ಎನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆ.
ಇದೀಗ ಹದ್ದುಮೀರಿ ಹೋಗಲು ಮುಂದಾಗಿದ್ದಾರೆ. ಯಾವ ಪಕ್ಷವೂ ಸರ್ಕಾರ ರಚನೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅಲ್ಲಿನ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರಬಹುದು ಎಂದರು.
ಚುನಾವಣಾ ಪೂರ್ವ ಒಪ್ಪಂದದಂತೆ ಬಿಜೆಪಿ 144 ಕ್ಷೇತ್ರದಲ್ಲಿ ಸ್ಪರ್ಧಿಸಿ 105 ಸ್ಥಾನಗಳನ್ನು ಪಡೆದಿತ್ತು. ಶಿವಸೇನೆ 120ರಲ್ಲಿ ಸ್ಪರ್ಧಿಸಿ 56 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಆದರೆ ಹಿಂದಿನ ಹೊಂದಾಣಿಕೆ ಮರೆತು ಅಧಿಕಾರದ ಆಸೆಯಿಂದ ಸೈದ್ಧಾಂತಿಕ ವಿರೋಧಿಯಾದ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಹೋಗಲು ಶಿವಸೇನೆ ಮುಂದಾಗಿದ್ದು ದೊಡ್ಡ ದುರಂತ. ಯಾವ ರಾಜ್ಯದಲ್ಲೂ ನಮ್ಮೊಂದಿಗೆ ಇರುವ ಪಕ್ಷ ದೂರವಾಗಿಲ್ಲ. ಹಿಂದಿನಿಂದ ಬಂದಂತಹ ಎಲ್ಲ ಪಕ್ಷಗಳು ನಮ್ಮೊಂದಿಗಿವೆ. ಅಧಿಕಾರಕ್ಕಾಗಿ ಶಿವಸೇನೆ ಚುನಾವಣಾ ಪೂರ್ವ ಹೊಂದಾಣಿಕೆ ವಿರುದ್ಧ ಹೊರಟಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು ಎಂದರು.
ಬಾಳಾ ಸಾಹೇಬ ಠಾಕ್ರೆ ತಮ್ಮ ಜೀವಿತಾವಧಿ ವರೆಗೂ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷದ ತುಷ್ಟೀಕರಣದ ವಿರುದ್ಧ ಬೆಳೆದವರು. ಇಂತಹ ತತ್ವ, ಸಿದ್ಧಾಂತಗಳನ್ನು ಹೊಂದಿದ ಶಿವಸೇನೆ ತುಷ್ಟೀಕರಣ ಮಾಡುವ ಪಕ್ಷಗಳೊಂದಿಗೆ ಕೈ ಜೋಡಿಸಲು ಮುಂದಾಗಿದೆ. ಬಾಳಾ ಸಾಹೇಬ ಠಾಕ್ರೆ ನಿಧನ ನಂತರ ನಡೆದ ಚುನಾವಣೆಗಳಲ್ಲಿ ಶಿವಸೇನೆ ಪಕ್ಷ ಅಸ್ತಿತ್ವ ಕಂಡುಕೊಂಡಿದ್ದರೆ ಅದು ಪ್ರಧಾನಿ ಮೋದಿ ಪ್ರಭಾವದಿಂದ ಎಂಬುದನ್ನು ಮರೆಯಬಾರದು. ಇಷ್ಟೆಲ್ಲದರ ನಡುವೆಯೂ ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಕೈ ಜೋಡಿಸಲು ಮುಂದಾಗಿರುವುದು ಶಿವಸೇನೆ ಪತನದ ಮೊದಲ ಹಂತವಾಗಿದೆ ಎಂದರು.