ಮುಂಬಯಿ : ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ತಾನು ಶೀಘ್ರವೇ ಉತ್ತರ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಹೇಳಿದ ಮರುದಿನವೇ ಅವರ ಪಕ್ಷದ ಹಿರಿಯ ಅಧಿಕಾರಿಯೋರ್ವರು “ಚಲೋ ಅಯೋಧ್ಯಾ, ಚಲೋ ವಾರಾಣಸಿ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಅವರ ನಿಕಟವರ್ತಿಯಾಗಿರುವ ಮಿಲಿಂದ್ ನಾರ್ವೇಕರ್ ಅವರು ಶ್ರೀರಾಮ ಮತ್ತು ಗಂಗಾ ನದೀ ಘಾಟ್ ಚಿತ್ರ ಸಮ್ಮಿಳಿತವಾಗಿರುವ ಭಾರೀ ದೊಡ್ಡ ವರ್ಣರಂಜಿತ ಪೋಸ್ಟರ್‌ಗಳನ್ನು ವಿವಿಧೆಡೆ ಹಾಕಿಸಿದ್ದಾರೆ. ಚಲೋ ಅಯೋಧ್ಯಾ, ಚಲೋ ವಾರಾಣಸಿ’ ಅಭಿಯಾನ 2019ರ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಶಿವಸೇನೆಯ ದೊಡ್ಡ ರಾಜಕೀಯ ಹೆಜ್ಜೆಯ ನಿರ್ಣಾಯಕ ಆಭಿಯಾನವಾಗಲಿದೆ ಎಂದವರು ಹೇಳಿದ್ದಾರೆ.
ಮುಂದಿನ ಮಹಾ ಚುನಾವಣೆಯಲ್ಲಿ ರಾಮ ಮಂದಿರ ವನ್ನು ಒಂದು ಪ್ರಧಾನ ವಿಷಯವನ್ನಾಗಿ ಮಾಡುವ ಬಿಜೆಪಿಯ ಕಸರತ್ತಿಗೆ ಪ್ರತಿಯಾಗಿ ಠಾಕ್ರೆ ಅವರು ಅಯೋಧ್ಯೆ ಮತ್ತು ವಾರಾಣಸಿ ಭೇಟಿಯನ್ನು ಕೈಗೊಳ್ಳಲಿದ್ದಾರೆ.
ಇದೇ ಜುಲೈ 27ರಂದು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಉದ್ಧವ್ ಅವರು “ಪ್ರಧಾನಿ ಮೋದಿ 2014ರಲ್ಲಿ ಭಾರೀ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಹೊರತಾಗಿಯೂ ರಾಮ ಮಂದಿರ ನಿರ್ಮಾಣದ ಬಗ್ಗೆ ಚಕಾರ ಎತ್ತಿಲ್ಲ’ ಎಂದು ಆರೋಪಿಸಿದರು.
ಅಯೋಧ್ಯೆಯಲ್ಲಿ ನಾನು ರಾಮ ಲಲ್ಲಾನ ದರ್ಶನ ಪಡೆಯುತ್ತೇನೆ; ಪೂಜೆ ಸಲ್ಲಿಸುತ್ತೇನೆ. ಹಾಗೆಯೇ ವಾರಾಣಸಿಗೆ ಭೇಟಿ ನೀಡಿ ಅಲ್ಲಿ ಗಂಗಾ ಶುದ್ಧೀಕರಣದ ಕೆಲಸ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಪರೀಕ್ಷಿಸುತ್ತೇನೆ ಎಂದು ಠಾಕ್ರೆ ಹೇಳಿದರು.