Advertisement

ಅಧಿಕಾರಕ್ಕಾಗಿ ಶಿವಸೇನೆ ಪಟ್ಟು: ಶೀಘ್ರ ನಿರ್ಣಯವಾಗಲಿ

10:18 PM Oct 29, 2019 | mahesh |

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆ ಕೈ ಹಿಡಿದುಕೊಂಡು ಚುನಾವಣೆಯನ್ನೇನೋ ಎದುರಿಸಿದವು, ಆದರೆ ಈಗ ಸರ್ಕಾರ ರಚಿಸುವ ವಿಚಾರದಲ್ಲಿ ಕೈ-ಕೈ ಮಿಲಾಯಿಸುತ್ತಿವೆ. 288 ಸ್ಥಾನಗಳಿಗಾಗಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 105 ಸ್ಥಾನಗಳನ್ನು, ಶಿವಸೇನೆಯು 56 ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗಿದ್ದವು. ಫ‌ಲಿತಾಂಶ ಹೊರಬಿದ್ದ ಕ್ಷಣದಿಂದಲೇ ಶಿವಸೇನೆ, 50:50 ಫಾರ್ಮುಲಾದ ಬಗ್ಗೆ ಮಾತನಾಡಲಾರಂಭಿಸಿತು. “”ಮೊದಲೇ ಒಪ್ಪಂದವಾದಂತೆ, ಎರಡೂ ಪಕ್ಷಗಳ ನಡುವೆ ತಲಾ ಎರಡೂವರೆ ವರ್ಷಗಳಿಗೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರವಾಗಬೇಕು, ಸಚಿವ ಸ್ಥಾನಗಳ ಸಮಾನ ಹಂಚಿಕೆಯಾಗಬೇಕು” ಎನ್ನುವುದು ಶಿವಸೇನೆ ಆಗ್ರಹ. ಆದರೆ ಇಂಥದ್ದೊಂದು ಒಪ್ಪಂದ ಆಗೇ ಇಲ್ಲ. ಆಗಿದ್ದರೂ ನಾನು ಆ ಸಮಯದಲ್ಲಿ ಅಲ್ಲಿರಲಿಲ್ಲ, ನಾನೇ ಐದು ವರ್ಷ ಸಿಎಂ’ ಎಂದು ಫ‌ಡ್ನವೀಸ್‌ ಸ್ಪಷ್ಟಪಡಿಸಿದ್ದಾರೆ. ಒಟ್ಟಲ್ಲಿ ಬಿಜೆಪಿಗೆ, ಅತಂತ್ರ ಸ್ಥಾನಗಳನ್ನು ಪಡೆದರೂ ಹರ್ಯಾಣದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿದೆ, ಆದರೆ ಮಹಾರಾಷ್ಟ್ರದಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದೆ.

Advertisement

ಶಿವಸೇನೆಯ ಎರಡೂವರೆ ವರ್ಷದ ರಾಜ್ಯಾಡಳಿತದ ಬೇಡಿಕೆಗೆ ಬಿಜೆಪಿ ಒಪ್ಪುವುದು ಅಸಾಧ್ಯವೇ ಸರಿ. ಈ ವಿಷಯದಲ್ಲಿ ಬಿಜೆಪಿ ಒಪ್ಪದಿದ್ದರೆ ಅನ್ಯ ವಿಕಲ್ಪಗಳತ್ತ ಮುಖಮಾಡಬೇಕಾಗುತ್ತದೆ ಎಂದು ಶಿವಸೇನೆ ಸಂದೇಶ ಕಳುಹಿಸಿದೆ. ಅನ್ಯ ಆಯ್ಕೆ ಎಂದರೆ ಎನ್‌ಸಿಪಿ-ಕಾಂಗ್ರೆಸ್‌ ಎಂದರ್ಥ. ಇತ್ತೀಚೆಗಷ್ಟೇ ಶಿವಶೇನೆ, ತನ್ನ ಮುಖವಾಣಿ “ಸಾಮ್ನಾ’ದ ಸಂಪಾದಕೀಯದಲ್ಲಿ ಎನ್‌ಸಿಪಿ-ಕಾಂಗ್ರೆಸ್‌ನ ಚುನಾವಣಾ ಸಾಧನೆಯನ್ನು ಹೊಗಳಿರುವುದು ಇದೇ ಕಾರಣಕ್ಕಾಗಿಯೇ. ಆದರೆ “ಸೆಕ್ಯುಲರ್‌’ ಕಾಂಗ್ರೆಸ್‌ “ಹಿಂದುತ್ವವಾದಿ’ ಶಿವಸೇನೆಯ ಜತೆ ಮೈತ್ರಿ ಮಾಡಿಕೊಳ್ಳುವುದೇ ಎನ್ನುವುದು ಪ್ರಶ್ನೆ. ತಾನೇನೋ ಸಿದ್ಧವಿರುವುದಾಗಿ ಕಾಂಗ್ರೆಸ್‌ ಸಂದೇಶ ಕಳುಹಿಸಿದೆ. ಆದರೆ ಒಂದು ವೇಳೆ ಈ ಮೂರೂಪಕ್ಷಗಳು ಸೇರಿ ಅಧಿಕಾರ ರಚಿಸಿದರೆ, ಆಗ ಶಿವಸೇನೆಗೆ ಏನು ಫ‌ಲ ಸಿಗುತ್ತದೆ? ಆ ಸರ್ಕಾರ ಎಷ್ಟು ದಿನ ಉಳಿಯಬಲ್ಲದು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ, ಎನ್‌ಸಿಪಿ-ಕಾಂಗ್ರೆಸ್‌ ಜತೆ ಕೈಜೋಡಿಸುವುದರಿಂದ ಶಿವಸೇನೆಗಂತೂ ಲಾಭವಿಲ್ಲ, ಅದಕ್ಕಿಂತ ಹೆಚ್ಚಾಗಿ ಅದರ ಮರಾಠಾ-ಹಿಂದುತ್ವ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ. ಇನ್ನೊಂದೆಡೆ, 2014ರಲ್ಲಿಯಂತೆ ಎನ್‌ಸಿಪಿಯೇನಾದರೂ ಈ ಬಾರಿಯೂ ಬಿಜೆಪಿಗೆ ಬೇಷರತ್‌ ಬೆಂಬಲ ಕೊಡುವ ಪ್ರಸ್ತಾಪ ಎದುರಿಟ್ಟು, ಬಿಜೆಪಿಯೇನಾದರೂ ಒಪ್ಪಿಕೊಂಡರೆ ಹೇಗೆಂಬ ಭಯವೂ ಶಿವಸೇನೆಗಿದೆ. 2014ರಲ್ಲಿ ಶಿವಸೇನೆ ಬಿಜೆಪಿಗೆ ಬೇಷರತ್‌ ಬೆಂಬಲ ಕೊಟ್ಟಿತ್ತು. ಈ ಕಾರಣಕ್ಕಾಗಿ, ಹೇಳಿಕೊಳ್ಳುವಂಥ ಮಂತ್ರಿಗಿರಿಯೇನೂ ಅದಕ್ಕೆ ದಕ್ಕಿರಲಿಲ್ಲ. ಈ ಬಾರಿ, ಬಿಜೆಪಿ ಸ್ವಲ್ಪ ಚೌಕಾಶಿ ಮಾಡಿದ ನಂತರ ಶಿವಸೇನೆಗೆ ಒಂದಷ್ಟು ಪ್ರಮುಖ ಸ್ಥಾನಗಳನ್ನು ಕೊಡಬಹುದೆನಿಸುತ್ತದೆ. ಮುಖ್ಯವಾಗಿ ಶಿವಸೇನೆಯ ಕಣ್ಣಿರುವುದು ಗೃಹ ಸಚಿವಾಲಯದ ಮೇಲೆ. ಈ ಇಲಾಖೆಯನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪುತ್ತದೋ ಇಲ್ಲವೋ ತಿಳಿಯದು, ಆದರೆ ಉಪಮುಖ್ಯಮಂತ್ರಿ ಸ್ಥಾನ, ಪಿಡಬ್ಲೂಡಿ, ಕೃಷಿ ಮತ್ತು ಶಿಕ್ಷಣ ಇಲಾಖೆಗಳನ್ನು ಅದು ಶಿವಸೇನೆಗೆ ಬಿಟ್ಟುಕೊಡಬಹುದು.

ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆಗೆ 5 ವರ್ಷಗಳವರೆಗೆ ಉಪಮುಖ್ಯಮಂತ್ರಿ ಹುದ್ದೆ ಕೊಡಲಂತೂ ಬಿಜೆಪಿ ಸಿದ್ಧವಿದೆ ಎನ್ನಲಾಗುತ್ತಿದೆ. ಆದರೆ, ಇದರೊಟ್ಟಿಗೆ ಬಿಜೆಪಿಯ ರಾಜ್ಯ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್‌ಗ‌ೂ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬುದು ಪಕ್ಷದ ನಾಯಕರ ಬೇಡಿಕೆ. ಎಲ್ಲಕ್ಕಿಂತ ಹೆಚ್ಚಾಗಿ, ಶಿವಸೇನೆಗೆ ತನ್ನ ರಾಜಕೀಯ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ಬಿಜೆಪಿ ಅನಿವಾರ್ಯ. ಅಲ್ಲದೇ, ಬೃಹನ್‌ಮುಂಬೈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಇಂಥ ಸಮಯದಲ್ಲಿ ಬಿಜೆಪಿಯನ್ನು ಎದುರುಹಾಕಿಕೊಳ್ಳುವ ರಿಸ್ಕ್ ತೆಗೆದುಕೊಳ್ಳಲಂತೂ ಶಿವಸೇನೆ ಸಿದ್ಧವಿಲ್ಲ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ, ಶಿವಸೇನೆ-ಬಿಜೆಪಿಯ ನಡುವಿನ ಬಿಕ್ಕಟ್ಟು ತಾತ್ಕಾಲಿಕ ಎನ್ನುವುದು ಅರಿವಾಗುತ್ತದೆ. ಆದರೆ, ಅಧಿಕಾರಕ್ಕಾಗಿ ನಡೆದಿರುವ ಈ ಪ್ರಹಸನದಿಂದ ಆಡಳಿತದ ಮೇಲೆ ಪೆಟ್ಟು ಬೀಳುತ್ತಿರುವುದನ್ನು ಈ ಪಕ್ಷಗಳು ಮರೆಯಬಾರದು. ಚುನಾವಣಾ ಸಮಯದಲ್ಲಂತೂ ಆಡಳಿತ ಯಂತ್ರ ನಿಂತುಹೋಗಿತ್ತು, ಈಗ ಫ‌ಲಿತಾಂಶ ಬಂದ ಮೇಲೂ ಪರಿಸ್ಥಿತಿ ಹೆಚ್ಚು ದಿನ ಹೀಗೇ ಮುಂದುವರಿಯುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಬಿಕ್ಕಟ್ಟನ್ನು ಬೇಗನೇ ಶಮನಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲೂ ಇದೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ಶೀರ್ಘ‌ದಲ್ಲೇ ಸ್ಪಷ್ಟ ನಿರ್ಣಯಕ್ಕೆ ಬರಬೇಕು.

Advertisement

Udayavani is now on Telegram. Click here to join our channel and stay updated with the latest news.

Next