ವಿಜಯಪುರ : ಹಿಂದುತ್ವ ಹಾಗೂ ರಾಷ್ಟ್ರೀಯ ಕಲ್ಪನೆಯ ಶಿವಸೇನೆ ಇದೀಗ ಒಂದು ಭಾಷೆಗೆ ಸೀಮಿತ ಆಗಿರುವುದು ದುರ್ದೈವ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದವರಿಗೆ ಕ್ಷಮೆ ಇಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಕಿಡಿ ಕಾರಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಬೆಳಗಾವಿ ನಗರದಲ್ಲಿ ಎಂಇಎಸ್ ಪುಂಡರು ಮಾಡಿರುವ ರಾಯಣ್ಣ ಮೂರ್ತಿ ದ್ವಂಸ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಿ, ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳಿಗೆ ಅವಮಾನ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಗುಂಪಿದೆ. ಯಾವುದೇ ಮಹಾನ್ ವಕ್ತಿಗಳ ಪುತ್ಥಳಿಗಳಿಗೆ ಅವಮಾನ ಮಾಡಬಾರದು. ದೇಶದ್ರೋಹದ ಕೃತ್ಯ ಎಸಗುವವರ ವಿರುದ್ಧ ಸರ್ಕಾರ ಕಠಿಣ ಶಿಕ್ಷೆಯ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕೃತ್ಯ ಎಸಗಿದ ಎಂಇಎಸ್ ಹಾಗೂ ಶಿವಸೇನೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಂಇಎಸ್ ಸೇರಿದಂತೆ ಇತರೆ ಕೆಲ ಸಂಘಟನೆಗಳಿಂದ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.