ತಲೆ ಮೇಲೆ ನೋಟ್‌ಬುಕ್ ಇಟ್ಟು ಓಡುವ, ಬಾಯಲ್ಲಿ ಚಮಚ ಕಚ್ಚಿ ಹಿಡಿದು ಅದರ ಮೇಲೆ ಲಿಂಬೆಹಣ್ಣನ್ನಿಟ್ಟು ನಡೆಯುವಂಥ ಸ್ಪರ್ಧೆಗಳಲ್ಲಿ ನೀವೂ ಭಾಗವಹಿಸಿರುತ್ತೀರಿ. ಅದಕ್ಕೆ ಏಕಾಗ್ರತೆ ಹಾಗೂ ವಸ್ತುವನ್ನು ಬ್ಯಾಲೆನ್ಸ್ ಮಾಡುವ ಚಾಕಚಕ್ಯತೆ ಬೇಕು. ಆದರೆ, ಇಸ್ಪೀಟ್ ಕಾರ್ಡ್ ಮೇಲೆ ಪ್ಲಾಸ್ಟಿಕ್ ಲೋಟವನ್ನು ಇಡುವ ಬ್ಯಾಲೆನ್ಸ್ ಮಾಡಬಲ್ಲಿರಾ?…
ಬೇಕಾಗುವ ವಸ್ತು: ಇಸ್ಪೀಟ್ ಕಾರ್ಡ್, ನೀರು/ಜ್ಯೂಸ್ ತುಂಬಿದ ಪ್ಲಾಸ್ಟಿಕ್ ಲೋಟ.
ಪ್ರದರ್ಶನ: ಜಾದೂಗಾರನ ಟೇಬಲ್ ಮೇಲೆ ಒಂದು ಇಸ್ಟೀಟ್ ಕಾರ್ಡ್ ಹಾಗೂ ಜ್ಯೂಸ್/ ನೀರಿನಿಂದ ಅರ್ಧ ತುಂಬಿದ ಪ್ಲಾಸ್ಟಿಕ್ ಲೋಟ ಇದೆ. ಜಾದೂಗಾರ ಇಸ್ಪೀಟ್ ಕಾರ್ಡ್ ಅನ್ನು ನೇರವಾಗಿ ನಿಲ್ಲಿಸಿ, ಅದರ ಮೇಲೆ ಪ್ಲಾಸ್ಟಿಕ್ ಲೋಟವನ್ನು ಸರಾಗವಾಗಿ ಇಟ್ಟು ಬಿಡುತ್ತಾನೆ. ಅಲ್ಲಾ, ಒಂದು ಇಸ್ಪೀಟೆಲೆಯ ಮೇಲೆ ನೀರಿನ ಲೋಟ ಅಲುಗಾಡದೆ ನಿಂತಿದ್ದು ಹೇಗೆ?
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್ ಕಾರ್ಡ್‌ನಲ್ಲಿ. ಅಂದರೆ ಒಂದು ಇಸ್ಪೀಟ್ ಕಾರ್ಡ್ ಪ್ರೇಕ್ಷಕರಿಗೆ ಕಾಣಿಸುತ್ತಿದರೂ, ಅದರ ಹಿಂದೆ ಇನ್ನೊಂದು ಇಸ್ಪೀಟ್ ಕಾರ್ಡ್ ಅಡಗಿರುತ್ತದೆ. ನೀವು ಒಂದು ಕಾರ್ಡ್‌ನ ಹಿಂದೆ ಇನ್ನೊಂದು ಕಾರ್ಡ್ ಇಟ್ಟು, ಅದರ ಅರ್ಧಭಾಗವನ್ನು ಮಾತ್ರ (ಚಿತ್ರದಲ್ಲಿ ತೋರಿಸಿರುವಂತೆ) ಅಂಟಿಸಿ. ಕಾರ್ಡ್ ಅನ್ನು ನೇರ ನಿಲ್ಲಿಸಿದಾಗ, ಇನ್ನರ್ಧ ಭಾಗ ಸ್ಟಾಂಡ್‌ನಂತೆ ಆಧಾರವಾಗಿ ನಿಲ್ಲುತ್ತದೆ. ಆಗ ಅದರ ಮೇಲೆ ಪ್ಲಾಸ್ಟಿಕ್ ಲೋಟವನ್ನಿಟ್ಟು ಸುಲಭವಾಗಿ ಬ್ಯಾಲೆನ್ಸ್ ಮಾಡಬಹುದು.
ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ: ಪ್ಲಾಸ್ಟಿಕ್ ಲೋಟ ಹಗುರವಾಗಿರುವುದರಿಂದ, ಅದರಲ್ಲಿ ಸ್ವಲ್ಪ ನೀರು ಹಾಕಬೇಕು. ಆದರೆ, ಜಾಸ್ತಿ ನೀರು ಹಾಕಿದರೆ ಅದರ ಭಾರವನ್ನು ಇಸ್ಪೀಟ್ ಕಾರ್ಡ್ ತಡೆಯುವುದಿಲ್ಲ. ಇನ್ನೊಂದು ಸಂಗತಿಯೇನೆಂದರೆ, ಚಾಕಚಕ್ಯತೆಯ ಈ ಜಾದೂವನ್ನು ಪ್ರಯೋಗಿಸಿ ನೋಡದೆ ಪ್ರದರ್ಶನಕ್ಕಿಳಿಯಬೇಡಿ.
ವಿನ್ಸೆಂಟ್ ಲೋಬೋ