Advertisement

Shirva: ಅಂದು ಕಸತ್ಯಾಜ್ಯದ ಕೊಂಪೆ; ಇಂದು ಸೆಲ್ಪಿ ಕಾರ್ನರ್‌..!

04:02 PM Oct 02, 2024 | Team Udayavani |

ಶಿರ್ವ: ಹಲವು ಸಮಯಗಳಿಂದ ಕಸ ತ್ಯಾಜ್ಯದ ಕೊಂಪೆಯಾಗಿದ್ದ ಬೆಳ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಡುಬೆಳ್ಳೆ ನೆಲ್ಲಿಕಟ್ಟೆ ಪ್ರದೇಶ ಈಗ ಜನಾಕರ್ಷಣೆಯ ಸೆಲ್ಪಿ ಕಾರ್ನರ್‌ ಆಗಿ ಬದಲಾಗಿದೆ.

Advertisement

ಬೆಳ್ಳೆ ಗ್ರಾ.ಪಂ.ನ ಸ್ವಚ್ಛತೆಯೇ ಸೇವೆ ಪರಿಕಲ್ಪನೆಯೊಂದಿಗೆ ಹೆಚ್‌ಸಿಎಲ್‌ ಫೌಂಡೇಶನ್‌ನ ಸಹಯೋಗದೊಂದಿಗೆ ಸಾಹಸ್‌ ಸಂಸ್ಥೆಯು ಕೈಜೋಡಿಸಿದ್ದರಿಂದಾಗಿ ಕಸ ತ್ಯಾಜ್ಯದ ಕೊಂಪೆಯಾಗಿ ಮಾರ್ಪಾಡಾಗಿದ್ದ ಪ್ರದೇಶ ಇಂದು ಆಕರ್ಷಕ ಸೆಲ್ಪಿಕಾರ್ನರ್‌ ಆಗಿ ಜನರನ್ನು ಸೆಳೆಯುತ್ತಿದೆ.

ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ-ಸ್ವಸ್ಥ ಭಾರತ ಪರಿಕಲ್ಪನೆಯಲ್ಲಿ ಬೆಳ್ಳೆ ಗ್ರಾ.ಪಂ.ಆಡಳಿತ ಕಸ ನಿರ್ಮೂಲನೆಗೆ ಪಣ ತೊಟ್ಟರೂ ಜನರು ಸ್ವತ್ಛತೆಗೆ ಆದ್ಯತೆ ನೀಡದೆ ಪ್ಲಾಸ್ಟಿಕ್‌ ಲಕೋಟೆಯಲ್ಲಿ ಕಸ ತುಂಬಿ ರಸ್ತೆ ಬದಿಗೆಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ಪ್ರದೇಶದ ಬಳಿ ಜನರು ಪ್ಲಾಸ್ಟಿಕ್‌ ಚೀಲದಲ್ಲಿ ಕಸ ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದರು. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಎಸೆದ ಕೊಳೆತ ವಸ್ತುಗಳು, ಕಸ ತ್ಯಾಜ್ಯಗಳನ್ನು ನಾಯಿ, ನರಿಗಳು ರಸ್ತೆಗೆ ಎಳೆದು ತಂದು ಪರಿಸರವಿಡೀ ದುರ್ವಾಸನೆಯಿಂದ ಕೂಡಿ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವಂತಿತ್ತು. ಕೊಳೆತ ವಸ್ತುಗಳಿಂದಾಗಿ ಪರಿಸರ ದುರ್ನಾತಮಯವಾಗಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು.

ಅಂದು ಬ್ಲ್ಯಾಕ್‌ ಸ್ಪಾಟ್‌

Advertisement

ಈ ಸ್ಥಳವು ಉಡುಪಿ-ಮೂಡುಬೆಳ್ಳೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದು, ಜನವಸತಿ ಕಡಿಮೆಯಿರುವ ಪ್ರದೇಶವಾಗಿದ್ದರಿಂದಾಗಿ ಸುಶಿಕ್ಷಿತ ನಾಗರೀಕರೇ ವಾಹನಗಳಲ್ಲಿ ಬಂದು ರಸ್ತೆ ಬದಿ ಕಸ ಹಾಕಿ ಹೋಗುತ್ತಿದ್ದರು. ಇದು ಸ್ಥಳಿಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಬೇಕಾಬಿಟ್ಟಿ ಕಸ ಎಸೆಯುವವರ ಮೇಲೆ ಕ್ರಮ ಕೈಗೊಳ್ಳುವ ಸಲುವಾಗಿ ಕಸ ಎಸೆಯುವ ಜಾಗದಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ನಾ‌ಗರಿಕರ ಅಸಹಕಾರದಿಂದಾಗಿ ತ್ಯಾಜ್ಯದ ಕೊಂಪೆಯಾಗಿದ್ದ ಪ್ರದೇಶವು ಜಿಲ್ಲೆಯ ಪ್ರಮುಖ ಬ್ಲ್ಯಾಕ್‌ ಸ್ಪಾಟ್‌ ಆಗಿ ಗುರುತಿಸಲ್ಪಟ್ಟಿತ್ತು.

ಕಸ ನಿರ್ವಹಣೆಗೆ ಆದ್ಯತೆ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬೆಳ್ಳೆ ಗ್ರಾಮ ಪಂಚಾಯತ್‌, ಜಿ.ಪಂ. ಉಡುಪಿ, ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ ತ್ಯಾಜ್ಯ ಬೀಳದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುದ್ದು,ಒಣ ಕಸವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದೆ. ಒಣ ಕಸ ಸಂಗ್ರಹಣೆ ಮತ್ತು ನಿರ್ವಹಣೆಯ ಬಗ್ಗೆ ಸಾಮೂಹಿಕ ಜಾಗೃತಿ ಅಭಿಯಾನದ ಸಲುವಾಗಿ ಪೇಟೆಯ ಅಂಗಡಿಗಳಿಗೆ ಮತ್ತು ಮನೆಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದೆ.

ಸೆಲ್ಫಿ ಕಾರ್ನರ್‌

ಬೆಳ್ಳೆ ಗ್ರಾ.ಪಂ. ಮತ್ತು ಹೆಚ್‌ಸಿಎಲ್‌ ಫೌಂಡೇಶನ್‌ನ ಸಹಯೋಗದೊಂದಿಗೆ ಸಾಹಸ್‌ ಸಂಸ್ಥೆಯ ವಿಶಾಲ, ಶೋಧನ್‌, ಅವಿನಾಶ್‌, ಸಾತ್ವಿಕ್‌ ಅವರು ಸ್ವಯಂ ಸ್ಪೂರ್ತಿಯಿಂದ ಸಾರ್ವಜನಿಕರು ಮತ್ತು ಬೆಳ್ಳೆ ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿಗಳ ಸಹಕಾರದೊಂದಿಗೆ ಸುಮಾರು 25 ಸಾವಿರ ರೂ.ವೆಚ್ಚದಲ್ಲಿ ಸೆಲ್ಫಿ ಪಾಯಿಂಟ್‌ ನಿರ್ಮಿಸಿದ್ದಾರೆ. ಕಸದ ಕೊಂಪೆಯಾಗಿದ್ದ ಪ್ರದೇಶವನ್ನು ಸ್ವತ್ಛಗೊಳಿಸಿ ಕುಳಿತುಕೊಳ್ಳಲು ಬೆಂಚ್‌ ಅಳವಡಿಸಲಾಗಿದೆ. ಪ್ರಕೃತಿಯ ನಡುವೆ ಸೆಲ್ಫಿ ಕಾರ್ನರ್‌ ನಿರ್ಮಿಸಿದ್ದರಿಂದಾಗಿ ಹೆದ್ದಾರಿ ಬದಿಯ ಪ್ರವಾಸಿಗರಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶವಾಗಿದೆ.

ಸೆಲ್ಫಿ ಕಾರ್ನರ್‌ ಅನ್ನು ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ದಿವ್ಯಾ ವಿ. ಆಚಾರ್ಯ ಸೆ. 30 ರಂದು ಉದ್ಘಾಟಿಸಿದ್ದಾರೆ. ಸೆಲ್ಪಿ ಕಾರ್ನರ್‌ ನಿರ್ಮಿಸಲು ಸಹಕರಿಸಿದ ಸಾಹಸ್‌ ಸಂಸ್ಥೆಯ ಪ್ರತಿನಿಧಿಗಳನ್ನು ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ, ಗ್ರಾ.ಪಂ. ಸದಸ್ಯರಾದ ಗುರುರಾಜ ಭಟ್‌,ರಾಜೆಂದ್ರ ಶೆಟ್ಟಿ, ರಂಜನಿ ಹೆಗ್ಡೆ, ಮತ್ತು ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿಗಳು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಬೆಳ್ಳೆ ಗ್ರಾ.ಪಂ. ವತಿಯಿಂದ ಸಮ್ಮಾನಿಸಿದ್ದಾರೆ.

ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ, ಉಪಾದ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬಂದಿ ಹಾಗೂ ಸಾಹಸ್‌ ಸಂಸ್ಥೆಯ ಪರಿಕಲ್ಪನೆಗೆ ನಾಗರಿಕರ ಮೆಚ್ಚುಗೆ ವ್ಯಕ್ತವಾಗಿದೆ.

ಸ್ವಚ್ಛತೆಗೆ ಸಹಕರಿಸಿ

ಪ್ಲಾಸ್ಟಿಕ್‌ ಚೀಲದಲ್ಲಿ ಕಸ ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ಪ್ರಜ್ಞಾವಂತ ನಾಗರಿಕರ ವರ್ತನೆ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿತ್ತು. ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ. ಕಸದ ಕೊಂಪೆ ಸೆಲ್ಪಿ ಕಾರ್ನರ್‌ ಆಗಿ ಬದಲಾಗಿದ್ದು ಸಂತಸ ತಂದಿದೆ. – ದಿವ್ಯಾ ವಿ. ಆಚಾರ್ಯ, ಅಧ್ಯಕ್ಷರು,ಬೆಳ್ಳೆ ಗ್ರಾ.ಪಂ.

ಗಮನ ಸೆಳೆವ ಪ್ರದೇಶ

ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ವಾಹನ ವ್ಯವಸ್ಥೆಯಿದ್ದರೂ, ನಾಗರಿಕರು ಮಾತ್ರ ರಸ್ತೆ ಬದಿಯಲ್ಲಿ ಕಸ, ತ್ಯಾಜ್ಯ ಸುರಿಯುತ್ತಿರುವುದು ಬೇಸರದ ಸಂಗತಿ. ಸೆಲ್ಫಿ ಕಾರ್ನರ್‌ ಯೋಜನೆಗೆ ಸಾಹಸ್‌ ಸಂಸ್ಥೆ ಕೈಜೋಡಿಸಿದ್ದು, ಕಸ ಎಸೆಯುವ ಜಾಗವನ್ನು ಸ್ವತ್ಛ ಗೊಳಿಸಿದ್ದರಿಂದಾಗಿ ಪ್ರವಾಸಿಗರಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶವಾಗಿದ್ದು, ಈ ಪ್ರದೇಶ ವಿನೂತನವಾಗಿ ಗಮನ ಸೆಳೆಯುತ್ತಿದೆ. – ಆನಂದ್‌ ಕುಲಕರ್ಣಿ, ಬೆಳ್ಳೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ.

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next