ಶಿರ್ವ: ಜಗತ್ತಿನಲ್ಲಿ ಬದಲಾವಣೆ ತರಲು ಪ್ರಯತ್ನಿಸುವ ಬಲಿಷ್ಠ ಆಯುಧ ಶಿಕ್ಷಣವಾಗಿದೆ. ಕತ್ತಲೆಯಿರುವ ಸಮಾಜಕ್ಕೆ ಬೆಳಕನ್ನು ನೀಡುವ ಕ್ಲಾಸ್ ರೂಮ್ ಬೋಧನೆಯು ಸಮಾಜದ ಬದಲಾವಣೆಗೆ ಪ್ರೇರಣೆ ನೀಡುತ್ತದೆ. ಸಂತ ಮೇರಿ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಯೋಗ್ಯ ನಾಗರಿಕರನ್ನು ರೂಪಿಸಿ, ಪರಿಸರದ ಕುಟುಂಬಗಳ ಏಳಿಗೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಕಾರಣವಾದ ಶಿಕ್ಷಣ ಸಂಸ್ಥೆಯ ಪುನಶ್ಚೇತನವಾಗಲು ಸರ್ವರ ಸಹಕಾರ ಬೇಕಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ವಿಗಾರ್ ಜನರಲ್ ಮೊ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಫೆ. 10 ರಂದು ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ಹಿಲಾರಿ ಗೊನ್ಸಾಲ್ವಿಸ್ ರಂಗಮಂಟಪದಲ್ಲಿ 50 ಸಂವತ್ಸರ ಪೂರೈಸಿದ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಅವಶ್ಯಕತೆಗಳಿಗೆ ಹೊಂದಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಸಂತ ಮೇರಿ ಸಮೂಹ ಸಂಸ್ಥೆಗಳು ನಡೆಸುತ್ತಿದ್ದು, ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಶ್ರೇಯೋಭಿವೃದ್ಧಿಗೋಸ್ಕರ ಸಹಕಾರ ನೀಡಬೇಕಾಗಿದೆ. ಸರಕಾರಗಳ ಧೋರಣೆಗಳಿಂದಾಗಿ ವಿದ್ಯಾಸಂಸ್ಥೆಗಳು ಶಿಕ್ಷಕರ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದ್ದು, ಸಮಸ್ಯೆಯನ್ನು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿ ಉಡುಪಿ ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರೆ|ಫಾ| ವಿನ್ಸೆಂಟ್ ಕ್ರಾಸ್ತಾ ಮಾತನಾಡಿ, ದೇಶದ ಭ್ರಷ್ಟ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗದೆ ನಾವೇ ಬದಲಾಗಬೇಕಿದೆ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹಕ್ಕೆ ಬಲಿಯಾಗದೆ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಪಾಸಾಗಿ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನ ನಡೆಸಿ ಎಂದು ಕಿವಿಮಾತು ಹೇಳಿದರು.
ಶಿರ್ವ ಗ್ರಾ.ಪಂ. ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಮಾತನಾಡಿದರು. ಶಿರ್ವ ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ|ಡಾ| ಲೆಸ್ಲಿ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಹಳೆವಿದ್ಯಾರ್ಥಿ, ಮುದರಂಗಡಿ ಚರ್ಚ್‌ನ ಧರ್ಮಗುರು ರೆ|ಫಾ|ಫ್ರೆಡ್ರಿಕ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಚರ್ಚ್‌ನ ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್ ಅರಾನ್ಹಾ, ಫಾ|ಜೇಸನ್ ಲೋಬೋ, ಫಾ|ರೋನ್ಸನ್ ಪಿಂಟೊ, ಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಮೋನಿಸ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಸಬಿನಾ ಪ್ರಿಯಾ ನೊರೊನ್ಹಾ, ಡಾನ್‌ಬೊಸ್ಕೊ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್ ಲೋಬೋ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಜೆಸಿಂತಾ ಡಿಸೋಜಾ, ಕೋಶಾಧಿಕಾರಿ ಡಾ| ಗುರುರಾಜ್ ಕೆ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಧೀರ್ ಜೂಡ್ ಡಿಸೋಜಾ ಮತ್ತು ವಿದ್ಯಾರ್ಥಿ ನಾಯಕ ಪವನ್ ಶೆಣೈ ವೇದಿಕೆಯಲ್ಲಿದ್ದರು.
ಚರ್ಚ್ ಪಾಲನ ಮತ್ತು ಆರ್ಥಿಕ ಮಂಡಳಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಸದಸ್ಯರು, ವಿವಿಧ ಸಂಘ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ವೃಂದ, ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ನೋರ್ಬರ್ಟ್ ಮಚಾದೋ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಗಿಲ್ಬರ್ಟ್ ಪಿಂಟೋ ನಿರೂಪಿಸಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಜಯಶಂಕರ .ಕೆ. ವಂದಿಸಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಬಿಸಿಯೂಟ, ಬೇಳೆ, ಮೊಟ್ಟೆ, ಸೈಕಲ್ ಮತ್ತಿತರ ಸವಲತ್ತುಗಳನ್ನು ದಾನಿಗಳಿಂದ ಕಾಡಿ ಬೇಡಿಯಾದರೂ ನೀಡಬಹುದು. ಕೆತ್ತನೆಯ ಕೆಲಸ ಮಾಡಿ ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ನೀಡುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯೆ ಬೋಧನೆ ಮಾಡುವ ಶಿಕ್ಷಕರನ್ನು ಸರಕಾರ ನೀಡಲಿ. -ರೆ|ಫಾ|ಡಾ| ಲೆಸ್ಲಿ ಡಿಸೋಜಾ, ಶಿರ್ವ ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ