Advertisement

ಶಿರ್ವ ಕೋಳಿ ಅಂಕಕ್ಕೆ ದಾಳಿ: ವಾಹನಗಳ ಸಹಿತ ಇಬ್ಬರ ವಶ ; ಉಡುಪಿ ಡಿಎಆರ್‌ ಪೊಲೀಸ್‌ ಶಾಮೀಲು

06:20 PM May 19, 2021 | Team Udayavani |

ಶಿರ್ವ: ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಶಿರ್ವ ಸೊರ್ಪು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಶಿರ್ವ ಪೊಲೀಸರು ಹಲವಾರು ವಾಹನಗಳ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದು ಇತರ 6 ಮಂದಿ ಪರಾರಿಯಾದ‌ ಘಟನೆ ಮೇ 18ರ ಸಂಜೆ ನಡೆದಿದೆ.

Advertisement

ಮೂಡುಬೆಳ್ಳೆ ಕಂಡಿಗ ನಿವಾಸಿ ಜಯ ಪೂಜಾರಿ (66)ಮತ್ತು ಪ್ರಸಾದ್‌ ಕುತ್ಯಾರ್‌ (38) ಬಂಧಿತರು. ಸುಂದರ ಆತ್ರಾಡಿ,ಸೂರ್ಯ ಎಡ್ಮೇರು,ಸುಧಾಕರ ಕಡಂಬು ಮೂಡು ಮಟ್ಟಾರು,ವಿಲ್ಫ್ರೆಡ್‌ ವಿಲಿಯಂ ಗೋಮ್ಸ್‌ ಮತ್ತು ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ.ಜೂಜಾಟಕ್ಕೆ ಉಪಯೋಗಿಸಿದ್ದ 1,200ರೂ.,4 ಹುಂಜಗಳು, ಕತ್ತಿ ಹಾಗೂ ಸ್ಥಳದಲ್ಲಿದ್ದ 6 ಮೋಟಾರ್‌ ಬೈಕ್‌ಗಳು, 4 ದ್ವಿಚಕ್ರ ವಾಹನಗಳು ಮತ್ತು 1 ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಎಆರ್‌ ಪೊಲೀಸ್‌ ಶಾಮೀಲು :

ಕೊರೊನಾ ಲಾಕ್‌ಡೌನ್‌ ಆತಂಕದ ನಡುವೆಯೂ ಶಿರ್ವ ಪದವು ನಿವಾಸಿ ಉಡುಪಿ ಡಿಎಆರ್‌ ಪೊಲೀಸ್‌ ಸಿಬಂದಿಯೋರ್ವರು ಮೊಬೈಲ್‌ ವಾಟ್ಸಪ್‌ ಮೂಲಕ (ಮೊಬೈಲ್‌ ಕಟ್ಟ)ಕೋಳಿ ಅಂಕವನ್ನು ಆಯೋಜಿಸಿದ್ದು , ಕೊರೊನಾ ಸೋಂಕಿತರು ಕೂಡಾ ಕೋಳಿ ಅಂಕದಲ್ಲಿ ಭಾಗವಹಿಸಿರುವುದಕ್ಕೆ ಸ್ಥಳೀಯ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ. ದಾಳಿ ನಡೆಸಿದ ಪೊಲೀಸರು ಕೋಳಿ ಅಂಕವನ್ನು ಆಯೋಜಿಸಿದ್ದ ಪೊಲೀಸ್‌ ಸಿಬಂದಿಯ ಹೆಸರನ್ನು ದೂರಿನಲ್ಲಿ ಕೈಬಿಟ್ಟಿದ್ದಲ್ಲದೆ, ವಶಪಡಿಸಿಕೊಂಡಿದ್ದ ವಾಹನಗಳ ಪೈಕಿ ಆತನ ಹೊಂಡಾ ಆಕ್ಟಿವಾ ಸ್ಕೂಟರನ್ನು ಠಾಣೆಯ ಪೊಲೀಸ್‌ಸಿಬಂದಿ ಬಿಟ್ಟಿದ್ದು , ವಶಪಡಿಸಿಕೊಂಡಿದ್ದ ಇತರ ವಾಹನಗಳ ಮಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿರುವುದು ನಾಚಿಗೇಡು : ಶ್ರೀರಾಮುಲು

Advertisement

ಶಿರ್ವ ಪರಿಸರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿರ್ವ ಗ್ರಾಮ ಪಂಚಾಯತ್‌ ಮೇ. 7 ರಂದು ತುರ್ತು ಸಭೆ ನಡೆಸಿತ್ತು. ಆ ಸಭೆಯಲ್ಲಿ ಕೂಡಾ ಪರಿಸರದಲ್ಲಿ ಕೋಳಿ ಅಂಕ ನಡೆಯುವ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ಪೊಲೀಸ್‌ ಇಲಾಖೆಯ ಗಮನಕ್ಕೆ ತಂದಿದ್ದು, ಶಿರ್ವ ಠಾಣೆಯ ಎಎಸ್‌ಐ ಶ್ರೀಧರ ಕೆ.ಜೆ. ಕೋಳಿ ಅಂಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಸೂಕ್ತ ಕ್ರಮಕ್ಕೆ ಆಗ್ರಹ  :

ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ನಾಗರಿಕರು ಸಕಾರಣವಿಲ್ಲದೆ ಸಂಚರಿಸದಂತೆ ರಾಜ್ಯ ಸರಕಾರದ ಸ್ಪಷ್ಟ ಆದೇಶವಿದ್ದರೂ, ಸರಕಾರದ ಆದೇಶವನ್ನು ಪಾಲಿಸದೆ ಅಪಾಯಕಾರಿ ರೋಗದ ಸೋಂಕು ಹರಡುವ ಸಾಧ್ಯತೆ ಇರುವ ವಿಷಯ ತಿಳಿದಿದ್ದರೂ, ಕೋಳಿ ಅಂಕ ಜೂಜಾಟವನ್ನು ಆಯೋಜಿಸಿದ ಪೊಲೀಸ್‌ ಇಲಾಖೆಯ ಸಿಬಂದಿಯ ಸಮಾಜಬಾಹಿರ ಕೃತ್ಯದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿರ್ವ ಪರಿಸರದ ನಾಗರಿಕರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next