ಶಿರ್ವ: ಬೆಳೆಯುತ್ತಿರುವ ಶಿರ್ವ ಮಂಚಕಲ್ ಪೇಟೆಯ ಹೃದಯ ಭಾಗದಲ್ಲಿದ್ದ ಹಳೆಯ ಬಸ್ ನಿಲ್ದಾಣಕ್ಕೆ ಮುಕ್ತಿ ದೊರೆತಿದ್ದು, ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳಿಂದ ಹೈಟೆಕ್ ಸ್ಪರ್ಶದೊಂದಿಗೆ ನೂತನ ಬಸ್ ತಂಗುದಾಣ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.
ಮಾತಾ-ಪಿತೃ ವಾತ್ಯಲ್ಯ ಮೆರೆದ ಮಕ್ಕಳು
ಶಿರ್ವ ಪರಿಸರದ ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣದ ಆವಶ್ಯಕತೆಯಿತ್ತು. ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿಯವರ ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಅವರ ಮಕ್ಕಳು ಸುಮಾರು 40 ಲ. ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಿ ಗ್ರಾ.ಪಂ. ಗೆ ಕೊಡುಗೆಯಾಗಿ ನೀಡಿ ಮಾತಾ-ಪಿತೃ ವಾತ್ಸಲ್ಯ ಮೆರೆದಿದ್ದಾರೆ. ಶಂಭು ಶೆಟ್ಟಿ ದಂಪತಿ ನೂತನ ಬಸ್ಸು ನಿಲ್ದಾಣದ ಕಾಮಗಾರಿಗೆ 2021ರ ಡಿ.19 ರಂದು ಶಿಲಾನ್ಯಾಸ ನೆರವೇರಿಸಿದ್ದರು.
ಹೈ-ಟೆಕ್ ತಂಗುದಾಣ
ತಂಗುದಾಣವು ಪೆಲೇಡಿಯನ್ ಶೈಲಿಯ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಗ್ರಾ.ಪಂ. ಗೆ ಆದಾಯ ತರುವ ಅತ್ಯಾಧುನಿಕ ಶಟರ್‌ಗಳಿರುವ 4 ಅಂಗಡಿ ಕೋಣೆಗಳನ್ನು ಹೊಂದಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 40 ಆಸನಗಳಿರುವ ಸ್ಟೀಲ್ ಬೆಂಚುಗಳನ್ನು ಅಳವಡಿಸಲಾಗಿದೆ. ಗ್ರಾನೈಟ್ ನೆಲಹಾಸು,ಪ್ಲಾಸ್ಟರ್ ಆಫ್ ಪ್ಯಾರಿಸ್ ಫಾಲ್ ಸೀಲಿಂಗ್,ಹೈಟೆಕ್ ಬೆಳಕಿನ ವ್ಯವಸ್ಥೆಯೊಂದಿಗೆ ಸಿಸಿ ಕೆಮರಾ ಅಳವಡಿಸಲಾಗಿದ್ದು, ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ನೂತನ ಬಸ್ ನಿಲ್ದಾಣವು ಮೇ. 18 ರಂದು ಸಂಜೆ ಲೋಕಾರ್ಪಣೆಗೊಳ್ಳಲಿದ್ದು, ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ದಂಪತಿ ಉದ್ಘಾಟಿಸಲಿದ್ದಾರೆ.ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್ ಪಾಟ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್ ಡೇಸಾ ಮತ್ತು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝೈನಿ ಭಾಗವಹಿಸಲಿದ್ದಾರೆ.
ಸರಕಾರದ ಅನುದಾನ ಹಿಂದಕ್ಕೆ
ಸುಮಾರು 45 ವರ್ಷಗಳ ಹಿಂದೆ ಶಿರ್ವ ಮುಖ್ಯರಸ್ತೆಯ ಕುಡ್ವರ ಹೊಟೇಲ್ ಬಳಿಯಿದ್ದ ಬಸ್ ನಿಲ್ದಾಣವು ಹಂಚಿನ ಕಟ್ಟಡದೊಂದಿಗೆ ಈಗಿನ ಬಸ್ ನಿಲ್ದಾಣದ ಜಾಗಕ್ಕೆ ಸ್ಥಳಾಂತರಗೊಂಡಿತ್ತು. ಹೊಸ ಬಸ್ಸು ನಿಲ್ದಾಣದ ನಿರ್ಮಾಣಕ್ಕಾಗಿ 2018ರಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಯವರ 10 ಲ. ರೂ. ಅನುದಾನ ಮಂಜೂರಾಗಿದ್ದು ಹಾಗೂ ಇತರ ಸಂಪನ್ಮೂಲಗಳಿಂದ ಬಸ್ಸು ತಂಗುದಾಣ ನಿರ್ಮಾಣಕ್ಕೆ ಶಿಲಾನ್ಯಾಸವೂ ನೆರವೇರಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ನಡೆಯದೆ ಅನುದಾನ ಹಿಂದಕ್ಕೆ ಹೋಗಿತ್ತು.
ಬಳಿಕ ಗ್ರಾಮ ಪಂಚಾಯತ್ 2021ರಲ್ಲಿ 15 ನೇ ಹಣಕಾಸು ಅನುದಾನದಲ್ಲಿ 20 ಲ.ರೂ. ಅನುದಾನ ತೆಗೆದಿರಿಸಿದ್ದರೂ, ಕೋವಿಡ್ ಬಳಿಕ ಸರಕಾರ ಗ್ರಾ.ಪಂ.ಗೆ ಅನುದಾನ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ತಂಗುದಾಣ ನಿರ್ಮಾಣ ಕಾರ್ಯ ನಡೆಯಲಿಲ್ಲ. ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಅವರ ಕೋರಿಕೆಯ ಮೇರೆಗೆ ದಾನಿ ಶಂಭು ಶೆಟ್ಟಿ ಮತ್ತು ಮಕ್ಕಳು ಶಿರ್ವ ಗ್ರಾಮಸ್ಥರ ಬಹುದಿನದ ಬೇಡಿಕೆಯನ್ನು ಈಡೇರಿಸುತ್ತಿರುವುದು ಗ್ರಾಮದ ಅಭಿವೃದ್ಧಿಗೆ ಮುಕುಟ ಪ್ರಾಯವಾಗಿದೆ. ಸಾಮಾಜಿಕ ಕಳಕಳಿಯಿರುವ ದಾನಿಗಳಿಂದ ಅಭಿವೃದ್ದಿ ಕಾಣುತ್ತಿರುವ ಶಿರ್ವ ಪರಿಸರಕ್ಕೆ ಅಗತ್ಯವಾಗಿ ಬೇಕಾಗಿದ್ದ ತಂಗುದಾಣದ ಬೇಡಿಕೆ ಈಡೇರಿದಂತಾಗಿದೆ.