Advertisement

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

06:00 PM Jan 09, 2025 | Team Udayavani |

ಶಿರ್ವ: ಉಡುಪಿ- ಕಾರ್ಕಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಮೂಡುಬೆಳ್ಳೆ ಪೇಟೆಯ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಪಣಗೊಳ್ಳುತ್ತಿದ್ದು, ಸಾರ್ವಜನಿಕರು, ವಾಹನಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಕಾರ್ಕಳ-ಪಳ್ಳಿ-ನಿಂಜೂರು ಕಡೆಯಿಂದ, ಶಿರ್ವ ಮಟ್ಟಾರು, ಪಾಂಬೂರು-ಕಟ್ಟಿಂಗೇರಿ ಕಡೆಯಿಂದ ಉಡುಪಿಗೆ ತೆರಳುವ ವಾಹನಗಳು ಮತ್ತು ಉಡುಪಿಯಿಂದ ಆ ಕಡೆಗೆ ಹೋಗುವ ವಾಹನಗಳು ಮೂಡುಬೆಳ್ಳೆ ಪೇಟೆಗಾಗಿಯೇ ಸಂಚರಿಸುತ್ತವೆ. ಕಾರ್ಕಳ-ಪಳ್ಳಿ ಕಡೆಯ ಕ್ರಶರ್‌ಗಳಿಂದ ಪಾದೆಕಲ್ಲು, ಜಲ್ಲಿಕಲ್ಲು ಹೊತ್ತು ತರುವ ಟಿಪ್ಪರ್‌, ಲಾರಿ ಸಹಿತ ಘನ ವಾಹನಗಳು, ಶಾಲಾ ಬಸ್‌ಗಳು, ಖಾಸಗಿ ವಾಹನಗಳು ಪೇಟೆಯ ಮೂಲಕವೇ ಚಲಿಸುವುದರಿಂದ ಅಗಲ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿಗೆ. ಅಲ್ಲದೆ ಕೆಲವೊಂದು ಘನ ವಾಹನಗಳು, ದ್ವಿಚಕ್ರ ವಾಹನಗಳು, ಬಸ್ಸುಗಳು ನಿಯಮ ಉಲ್ಲಂ ಸಿ ಅಡ್ಡಾದಿಡ್ಡಿಯಾಗಿ ಚಲಿಸುವುದರಿಂದ ಬ್ಲಾಕ್‌ ಸಂಭವಿಸುತ್ತಿದೆ.

ಸಮಸ್ಯೆಗೆ ಮೂಲ ಕಾರಣಗಳೇನು?
– ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌, ವಿರುದ್ಧ ದಿಕ್ಕಿನಲ್ಲಿ ಚಲಿಸುವುದು.
– ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮೇಲ್ಪೇಟೆ ಮತ್ತು ಬಸ್‌ಸ್ಟಾಂಡ್‌ ಬಳಿ ಅವಧಿ ಮೀರಿ ನಿಲ್ಲುವುದು.
– ಪಾಂಬೂರು-ಮೂಡುಬೆಳ್ಳೆ ರಸ್ತೆ ಕೂಡುವಲ್ಲಿಯೇ ಬಸ್‌ಸ್ಟಾಂಡ್‌ ಇದ್ದು, ಈ ರಸ್ತೆಯೊಂದಿಗೆ ಮುಖ್ಯ ರಸ್ತೆ ಕೂಡ ಬ್ಲಾಕ್‌ ಆಗುತ್ತದೆ.
– ಮೂಡುಬೆಳ್ಳೆ -ಪಾಂಬೂರು ರಸ್ತೆ ಬದಿಯಲ್ಲಿ ಪ.ಪೂ. ಕಾಲೇಜು, ಆಂಗ್ಲ ಮಾಧ್ಯಮ ಶಾಲೆ ಇರುವುದರಿಂದ ಶಾಲೆಯ ವಾಹನಗಳು ಕೂಡ ಇಲ್ಲೇ ಬರುತ್ತವೆ.
– ಖಾಸಗಿ ಬಸ್‌ಗಳ ಪೈಪೋಟಿಯಿಂದ ಕಟ್ಟಿಂಗೇರಿ- ಪಾಂಬೂರು-ಮೂಡುಬೆಳ್ಳೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗುತ್ತಿದೆ.
– ಘನ ವಾಹನಗಳು ಮುಖ್ಯ ರಸ್ತೆಯಲ್ಲಿಯೇ ಚಲಿಸುವುದು.
– ಬಸ್‌ಸ್ಟಾಂಡ್‌ ಬಳಿ ಖಾಸಗಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದರಿಂದ ಬಸ್‌ಗಳಿಗೆ ಸಮಸ್ಯೆಯಾಗತ್ತಿದೆ.
– ಅಗಲ ಕಿರಿದಾದ ರಸ್ತೆಯಲ್ಲಿ ವಾಹನ ಚಾಲಕರು ನಿಯಮ ಮೀರಿ ಪಾರ್ಕಿಂಗ್‌ ಮಾಡಿ ರಸ್ತೆಯೇ ಬ್ಲಾಕ್‌.

ಒಂದೇ ಬದಿ ಪಾರ್ಕಿಂಗ್‌ ಮತ್ತೆ ಬರಲಿ
ಕೆಲವರ್ಷಗಳ ಹಿಂದೆ ಶಿರ್ವ ಠಾಣೆಯಲ್ಲಿದ್ದ ಪಿಎಸ್‌ಐ ಅಶೋಕ್‌ ಅವರು ಪೇಟೆಯ ಒಂದು ಪಾರ್ಶ್ವದಲ್ಲಿ ಪಾರ್ಕಿಂಗ್‌ ನಿಯಮ ಜಾರಿಗೊಳಿಸಿ, ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಿದ್ದರು. ಅವರು ವರ್ಗವಾಗಿ ತೆರಳಿದ ಬಳಿಕ ಅವರು ವಿಧಿಸಿದ್ದ ನಿಯಮಗಳು ಮುಂದುವರೆಯಲಿಲ್ಲ. ಮತ್ತೆ ಬಂದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಪ್ರಯತ್ನ ನಡೆಸಿದರೂ ಸಹಕಾರ ಸಿಗಲಿಲ್ಲ. ಹಳೆ ನಿಯಮ ಮತ್ತೆ ಜಾರಿ ಮಾಡಿದರೆ ಉತ್ತಮ ಎನ್ನುವುದು ಜನರ ಅಭಿಪ್ರಾಯ.

ಇಲಾಖೆಯಿಂದ ಸೂಕ್ತ ಕ್ರಮ
ಅಗಲ ಕಿರಿದಾದ ರಸ್ತೆಯಿಂದಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ದಟ್ಟಣೆಯಾಗುತ್ತಿದೆ. ರಸ್ತೆ ವಿಸ್ತರಣೆಯಾಗುವವರೆಗೆ ಪೊಲೀಸ್‌ ನಿಯೋಜನೆ ಮಾಡಿ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಶಕ್ತಿವೇಲು ಇ., ಶಿರ್ವ ಠಾಣೆ ಪಿಎಸ್‌ಐ

Advertisement

ಸಂಚಾರ ನಿಯಮ ಪಾಲನೆ ಮಾಡಿ
ನಿಯಮ ಪಾಲನೆ ಮಾಡದೆ ಅವಧಿ ಮೀರಿ ಬಸ್‌ಸ್ಟಾಂಡಿನಲ್ಲಿ ನಿಲ್ಲಿಸುವ ಖಾಸಗಿ ಬಸ್ಸುಗಳಿಂದ ಟ್ರಾಫಿಕ್‌ ಜಾಂ ಉಂಟಾಗಿ ಕಿರಿಕಿರಿಯಾಗುತ್ತದೆ. ಖಾಸಗಿಯವರಿಗೆ ಈ ಭಾಗದಲ್ಲಿ ಸಂಚಾರ ನಿಯಮ ಪಾಲನೆ ಮಾಡುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಮಾದರಿಯಾಗಲಿ.
-ಸುಧಾಕರ ಪಾಣಾರ, ಅಲ್ಫೋನ್ಸ್‌ ಕೆ. ಆಳ್ವ, ಮೂಡುಬೆಳ್ಳೆ

ಸಮಸ್ಯೆಗೆ ಪರಿಹಾರಗಳೇನು?
ವಾಹನಗಳ ಚಾಲಕರು ವಿವೇಚನೆಯಿಂದ ವರ್ತಿಸಿ ಸಂಚಾರ ನಿಯಮ ಪಾಲಿಸಿದಲ್ಲಿ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಲಿದೆ.

ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೂಡುಬೆಳ್ಳೆ ಪೇಟೆಯ ಹೊರವಲಯದಲ್ಲಿರುವ ಲಯನ್ಸ್‌ ಕ್ಲಬ್‌- ಬಬ್ಬರ್ಯ ಕೆರೆ-ಗಣಪನಕಟ್ಟೆ ರಸ್ತೆಯನ್ನು ವಿಸ್ತರಣೆ ಮಾಡಬೇಕು.

ಉಭಯ ಬದಿಯಿಂದ ಮೂಡುಬೆಳ್ಳೆ ಪೇಟೆ ಪ್ರವೇಶಿಸುವ ವಾಹನಗಳಿಗೆ ಹೊರಭಾಗದ ರಸ್ತೆ ಪೂರಕವಾಗಿದ್ದು , ಘನವಾಹನಗಳು ಮೂಡುಬೆಳ್ಳೆ ಪ್ರವೇಶಿಸದೆ ಹೊರ ರಸ್ತೆಯ ಮೂಲಕ ತೆರಳುವುದನ್ನು ಕಡ್ಡಾಯ ಗೊಳಿಸಿದರೆ ಉತ್ತಮ.

ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮಾತ್ರ ಪೇಟೆಗೆ ಬಂದು ನಿಲುಗಡೆ ಮತ್ತು ಬಸ್‌ ತಿರುಗಿಸುವುದನ್ನು ಗಣಪನ ಕಟ್ಟೆ ಬಳಿ ಅಥವಾ ಹೊರವಲಯದ ರಸ್ತೆಯಲ್ಲಿ ಮಾಡಿದರೆ ಅನುಕೂಲ.

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next