ಶಿರ್ವ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಗ್ರಾಮ ಪಂಚಾಯತ್ ಶಿರ್ವ ಮತ್ತು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಮಲೇರಿಯಾ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಬುಧವಾರ ಚಾಲನೆ ನೀಡಿದರು.
ಬಳಿಕ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ರಾವ್ ಮಲೇರಿಯಾ ರೋಗದ ಬಗ್ಗೆ ಮಾಹಿತಿ ನೀಡಿ ಜನರು ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗಿ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಜ್ವರ ಬಂದಲ್ಲಿ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿ ರೋಗವನ್ನು ಶೀಘ್ರ ಪತ್ತೆ ಮಾಡಿ ಬೇರೆಯವರಿಗೆ ಹರಡದಂತೆ ಸಮುದಾಯ ಸಹಭಾಗಿತ್ವದ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಲೇರಿಯಾ ಮಾಹಿತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ ಮಲೇರಿಯಾ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳುತ್ತಿದ್ದಾರೆ. ಜ್ವರ ಬಂದಲ್ಲಿ ನಾಗರಿಕರು ಆಶಾ ಕಾರ್ಯಕರ್ತೆಯರ ನೆರವು ಪಡೆದು ರಕ್ತಪರೀಕ್ಷೆ ಮಾಡಿಸಿಕೊಂಡು ಸಮುದಾಯ ಆರೋಗ್ಯ ಕೇಂದ್ರದ ಸೇವೆ ಪಡೆದು ಶಿರ್ವ ಪರಿಸರವನ್ನು ಮಲೇರಿಯಾ ಮುಕ್ತ ಪ್ರದೇಶವನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ದಂತ ವೈದ್ಯಾಧಿಕಾರಿ ಡಾ|ಗಾಯತ್ರಿ ವೇದಿಕೆಯಲ್ಲಿದ್ದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದಿಂದ ಗ್ರಾ.ಪಂ, ವರೆಗೆ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಆರೋಗ್ಯ ಸಹಾಯಕಿಯರು, ಆರೋಗ್ಯ ಕೇಂದ್ರದ ಸಿಬಂದಿ, ಗಾ.ಪಂ. ಸಿಬಂದಿ, ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿ, ವಂದಿಸಿದರು.